ದೇಶ

ರಿಲಯನ್ಸ್ ವಿದ್ಯುತ್ ಸ್ಥಾವರದಲ್ಲಿ ವಿಷಕಾರಿ ತ್ಯಾಜ್ಯ ಸೋರಿಕೆ: ಐವರು ನಾಪತ್ತೆ

Shilpa D

ಸಿಂಗ್ರೌಲಿ: ಮಧ್ಯಪ್ರದೇಶದ ಸಿಗ್ರೌಂಲಿ ಪ್ರದೇಶದಲ್ಲಿರುವ ರಿಲಯನ್ಸ್ ಮಾಲಿಕತ್ವದ ವಿದ್ಯುತ್ ಸ್ಥಾವರದಲ್ಲಿ ವಿಷಕಾರಿ ತ್ಯಾಜ್ಯ ಸೋರಿಕೆಯಾಗಿದ್ದು ಗ್ರಾಮದ ಐವರು ನಾಪತ್ತೆಯಾಗಿದ್ದಾರೆ.

ಭೋಪಾಲ್‌ನಿಂದ 680 ಕಿ.ಮೀ ದೂರದಲ್ಲಿರುವ ಈ ಕಲ್ಲಿದ್ದಲು ವಿದ್ಯುತ್ ಸ್ಥಾವರದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಮೂರನೇ ಅವಘಡ ಇದಾಗಿದೆ. ರಿಲಯನ್ಸ್ ಪವರ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಿಯ ಕಟ್ಟೆಯೊಡೆದು ವಿಷ ತ್ಯಾಜ್ಯಗಳು ಹೊರಗೆ ಬಂದು ಎಲ್ಲೆಡೆ ಹರಿಯುತ್ತಿರುವ ಫೋಟೊ ಇದೀಗ ವೈರಲ್ ಆಗಿದೆ.

ವಿದ್ಯುತ್ ಸ್ಥಾವರದ ವಿಷಕಾರಿ ತ್ಯಾಜ್ಯಗಳನ್ನು ಸಂಗ್ರಹಿಸುವ ಕೃತಕ ಕೊಳದ ಕಟ್ಟೆ ಒಡೆದು ಅದರಲ್ಲಿದ್ದ ವಿಷಕಾರಿ ವಸ್ತುಗಳು ಎಲ್ಲಾ ಕಡೆಯೂ ಹರಿದುಬರುತ್ತಿದೆ. ಅದಕ್ಕೆ ಸುತ್ತಮುತ್ತ ಇರುವ ಕೆಸರೂ ಆವರಿಸಿದೆ.

ಸುಮಾರು 21 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವುಳ್ಳ ಈ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಈ ತ್ಯಾಜ್ಯಗುಂಡಿಯ ಸಮೀಪವೇ ಇದ್ದ ಮನೆಯಲ್ಲಿ ವಾಸವಾಗಿದ್ದ ಐವರು ನಾಪತ್ತೆಯಾಗಿದ್ದಾರೆ.ಅಷ್ಟೇ ಅಲ್ಲದೆ ಅಲ್ಲಿ ಆಸುಪಾಸಿನಲ್ಲಿದ್ದ ಬೆಳೆಗೂ ಅಪಾರ ಹಾನಿಯುಂಟಾಗಿದೆ ಎಂದು ಸಿಂಗ್ರೌಲಿ ಜಿಲ್ಲಾಧಿಕಾರಿ ಕೆವಿಎಸ್ ಚೌಧರಿ ಮಾಹಿತಿ ನೀಡಿದ್ದಾರೆ.

SCROLL FOR NEXT