ದೇಶ

40 ಕೋಟಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ 20 ನಿಯಂತ್ರಣ ಕೊಠಡಿಗಳ ಸ್ಥಾಪನೆ!

Nagaraja AB

ನವದೆಹಲಿ: ಕೊರೋನಾವೈರಸ್ ಲಾಕ್ ಡೌನ್ ಮಧ್ಯೆದಲ್ಲಿ ವಲಸೆ ಕಾರ್ಮಿಕರ ವೇತನ ಸಂಬಂಧಿತ ಕುಂದುಕೊರತೆಗಳನ್ನು ಪರಿಹರಿಸಲು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ  ಪ್ಯಾನ್-ಇಂಡಿಯಾ ಆಧಾರದ ಮೇಲೆ 20 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ಇಂದು ತಿಳಿಸಿದೆ

ಕೆಲವು ಕಡೆಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಏಪ್ರಿಲ್ 20ರಿಂದ  ಮೇ 3ರವರೆಗೂ ಷರತ್ತುಬದ್ಧ ವಿನಾಯಿತಿಯೊಂದಿಗೆ ಲಾಕ್ ಡೌನ್ ವಿಸ್ತರಿಸುವುದಾಗಿ  ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ವಲಸೆ ಕಾರ್ಮಿಕರು ನಿರುದ್ಯೋಗ ಅಥವಾ ಸಂಬಳಕ್ಕೆ ಕತ್ತರಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 

ಲಾಕ್ ಡೌನ್ ಅವಧಿಯಲ್ಲಿ ದೇಶದಲ್ಲಿನ  40 ಕೋಟಿ ಅಸಂಘಟಿತ ವಲಯದ ಕಾರ್ಮಿಕರು ಬಡತನಕ್ಕೆ ತಳಲ್ಪಡಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ತಿಳಿಸಿದೆ. 

ಕೋವಿಡ್- 19 ಹಿನ್ನೆಲೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ದೇಶಾದ್ಯಂತ  ಪರಿಹರಿಸುವ ನಿಟ್ಟಿನಲ್ಲಿ ಮುಖ್ಯ ಕಾರ್ಮಿಕ ಆಯುಕ್ತರ ಅಡಿಯಲ್ಲಿ 20 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನ ಸಂಬಂಧಿತ ಕುಂದುಕೊರತೆಗಳನ್ನು ಪರಿಹರಿಸಲು ಈ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೇಳಿದೆ.

ವಿವಿಧ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯದ ಮೂಲಕ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ತಗ್ಗಿಸಲು ಈ ನಿಯಂತ್ರಣ ಕೊಠಡಿಗಳು ಕೆಲಸ ಮಾಡಲಿದ್ದು,  ಪೋನ್ ನಂಬರ್, ವಾಟ್ಸಾಪ್ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ. ಕಾರ್ಮಿಕ ಜಾರಿ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಪ್ರಾದೇಶಿಕ ಕಾರ್ಮಿಕ ಆಯುಕ್ತರು ಮತ್ತು ಆಯಾ ಪ್ರದೇಶಗಳ ಉಪ ಮುಖ್ಯ ಕಾರ್ಮಿಕ ಆಯುಕ್ತರು ನಿಯಂತ್ರಣ ಕೊಠಡಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 

SCROLL FOR NEXT