ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಹರಡುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
ಇದರಿಂದ ದೇಶದಲ್ಲಿ ಲಾಕ್ ಡೌನ್ ಅನ್ನು 18 ದಿನಗಳ ಕಾಲ ವಿಸ್ತರಿಸಿದಂತಾಗಿದೆ. ಆದರೆ, ಲಾಕ್ ಡೌನ್ ನಿಂದ ಕಂಗೆಟ್ಟಿರುವ ಜನರಿಗೆ ಒಂದು ಸಿಹಿ ಸುದ್ದಿಯನ್ನೂ ನೀಡಿದ್ದಾರೆ. ಏ. 20ರ ನಂತರ ಕೊರೋನಾ ಸೋಂಕಿನಿಂದ ಮುಕ್ತವಾಗಿರುವ ಪ್ರದೇಶಗಳಲ್ಲಿ ಷರತ್ತುಬದ್ಧ ರಿಯಾಯಿತಿ ನೀಡುವ ಘೋಷಣೆ ಮಾಡಿದ್ದಾರೆ.
ಇದಕ್ಕಾಗಿ ಎಲ್ಲಾ ರಾಜ್ಯ, ಜಿಲ್ಲೆಗಳು ಒಂದು ವಾರದ ಅಗ್ನಿ ಪರೀಕ್ಷೆ ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ಲಾಕ್ ಡೌನ್ ನಿಯಮಗಳ ಪಾಲನೆ, ಜನರ ಸಹಕಾರಗಳ ಮೇಲೆ ನಿಗಾ ವಹಿಸಲಾಗುವುದು. ಈ ಸಮಯದಲ್ಲಿ ಕೊರೋನಾ ಹಾಟ್ ಸ್ಪಾಟ್ ಗಳಲ್ಲದ ಪ್ರದೇಶಗಳಲ್ಲಿ 10 ಷರತ್ತುಗಳನ್ನೊಳಗೊಂಡ ರಿಯಾಯಿತಿ ನೀಡಲಾಗುವುದು ಎಂದಿದ್ದಾರೆ.
ಆದರೆ, ಈ ಪ್ರದೇಶದಲ್ಲಿ ಒಂದೊಮ್ಮೆ ಕೊರೋನಾ ವೈರಸ್ ಪಾದ ಊರಿದರೆ ತಕ್ಷಣ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆಯಲಾಗುವುದು. ಬಡ ಜನರ ಸಂಕಷ್ಟ ಕಡಿಮೆಗೊಳಿಸಲು ಈ ನಿಯಮ ರೂಪಿಸಲಾಗಿದೆ. ಈ ಕುರಿತು ಸಂಬಂಧಿಸಿದ ರಾಜ್ಯ ಸರ್ಕಾರಗಳು ಬುಧವಾರ ವಿಸ್ತೃತ ಮಾರ್ಗಸೂಚಿ ಪ್ರಕಟಿಸಲಿವೆ ಎಂದಿದ್ದಾರೆ.
ಕೊರೋನಾ ಕುರಿತು ಬೇಜವಾಬ್ದಾರಿ ಬೇಡ, ಬೇರೆಯವರಿಗೂ ಬೇಜವಾಬ್ದಾರಿತನ ತೋರಲು ಬಿಡಬೇಡಿ. ಏಪ್ರಿಲ್ 20ರಿಂದ ಸೀಮಿತ ಪ್ರದೇಶಗಳಲ್ಲಿ ಸೀಮಿತ ರಿಯಾಯಿತಿಗಳು ದೊರೆಯಲಿದೆ. ಇದನ್ನು ಬಡವರನ್ನು ಗಮನದಲ್ಲಿರಿಸಿಕೊಂಡು ಮಾಡಲಾಗಿದೆ. ದಿನನಿತ್ಯದ ದುಡಿಮೆಯಿಂದ ಜೀವಿಸುವವರು ನಮ್ಮ ದೊಡ್ಡ ಕುಟುಂಬವಾಗಿದೆ. ಅವರ ಕಡೆಗೆ ಗಮನ ನೀಡಬೇಕಿದೆ ಎಂದಿದ್ದಾರೆ.
ದೇಶದಲ್ಲಿ ಕೊರೋನಾ ಹಾಟ್ ಸ್ಪಾಟ್ ಗಳನ್ನು ಗುರುತಿಸಿ ಮೊದಲಿಗಿಂತ ಹೆಚ್ಚು ನಿಗಾ ವಹಿಸಬೇಕು. ಹಾಟ್ ಸ್ಪಾಟ್ ಆಗಿ ಬದಲಾಗುವ ಲಕ್ಷಣಗಳಿರುವ ಪ್ರದೇಶಗಳ ಮೇಲೂ ನಿಗಾ ವಹಿಸಬೇಕು. ಹೊಸ ಹಾಟ್ ಸ್ಟಾಟ್ ಗಳು ನಿರ್ಮಾಣವಾದಲ್ಲಿ ಕೊರೋನಾ ವಿರುದ್ಧದ ನಮ್ಮ ಎಲ್ಲಾ ಹೋರಾಟ ನಿಷ್ಫಲವಾಗುತ್ತದೆ ಎಂದು ಹೇಳಿದ್ದಾರೆ.
ಮೋದಿ ಭಾಷಣದ ವಿವರ:
ನಿಮ್ಮೆಲ್ಲರ ಸಹಕಾರದಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಷ್ಟ ಸಹಿಸಿಕೊಂಡು ದೇಶವನ್ನು ರಕ್ಷಿಸಿದ್ದೀರಿ.ಇದರಲ್ಲಿ ನೀವು ಎದುರಿಸಿದ ಕಷ್ಟಗಳ ಅರಿವಿದೆ. ಆಹಾರ, ಪ್ರಯಾಣ, ಮನೆ-ಕುಟುಂಬಗಳಿಂದ ದೂರುವಿರುವ ಸಂಕಷ್ಟ ಎದುರಿಸಿದ್ದೀರಿ. ನೀವು ದೇಶಕ್ಕಾಗಿ ಶಿಸ್ತಿನ ಸಿಪಾಯಿಗಳ ತರ ನಿಮ್ಮ ಕರ್ತವ್ಯ ನಿಭಾಯಿಸಿದ್ದೀರಿ. ನಿಮಗೆಲ್ಲರಿಗೂ ನನ್ನ ನಮನಗಳು.
ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ನಾವೆಲ್ಲರೂ ಸಾಮೂಹಿಕ ಶಕ್ತಿಯನ್ನು ಪ್ರದರ್ಶಿಸಬೇಕು. ಇದು ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವಾಗಿದೆ. ಅವರ ಜೀವನ ಪ್ರತಿ ಸಂಕಷ್ಟವನ್ನು ಸಂಕಲ್ಪ ಶಕ್ತಿ ಹಾಗೂ ದೃಢತೆಯೊಂದಿಗೆ ಎದುರಿಸುವ ಸಂದೇಶ ನೀಡುತ್ತದೆ.
ಅನೇಕ ರಾಜ್ಯಗಳಲ್ಲಿ ಹೊಸ ವರ್ಷದ ಆರಂಭವಾಗಿದೆ. ಈ ಸಮಯದಲ್ಲಿ ನಾನು ಪ್ರತಿಯೊಬ್ಬರ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ.
ಇತರ ದೇಶಗಳಲ್ಲಿ ಕೊರೋನಾ ಪರಿಸ್ಥಿತಿ ಹೀನಾಯವಾಗಿದೆ. ಇದಕ್ಕೆ ಹೋಲಿಸಿದರೆ ದೇಶದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗದರಿಉವಾಗಲೇ ಕೊರೋನಾ ಪೀಡಿತ ರಾಷ್ಟ್ರಗಳಿಂದ ಆಗಮಿಸುವವರ ತಪಾಸಣೆ ಆರಂಭಿಸಿತ್ತು.
ಸೋಂಕಿತರ ಸಂಖ್ಯೆ 100ಕ್ಕೆ ತಲುಪುವ ಮುನ್ನವೇ ಭಾರತದಲ್ಲಿ ವಿದೇಶಿಗರನ್ನು 14 ದಿನಗಳ ಪ್ರತ್ಯೇಕತೆ ಕಡ್ಡಾಯವಾಗಿಸಲಾಗಿತ್ತು. ಬಾರ್, ಚಿತ್ರಮಂದಿರ, ಜಿಮ್ ಗಳನ್ನು ಬಂದ ಮಾಡಲಾಗಿತ್ತು.
ದೇಶದಲ್ಲಿ 550 ಪ್ರಕರಣಗಳಿದ್ದಾಗ ದೇಶಾದ್ಯಂತ 21 ದಿನಗಳ ಸಂಪೂರ್ಣಲಾಕ್ ಡೌನ್ ನಂತಹ ಮಹತ್ತರ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ದೇಶದಲ್ಲಿ ಸಮಸ್ಯೆ ಹೆಚ್ಚಳವಾಗಲು ಕಾಯಲಿಲ್ಲ. ಬದಲಿಗೆ, ಸಮಸ್ಯೆ ಕಾಣಿಸುತ್ತಲೇ ಅದನ್ನು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಮೂಲಕ ನಿಲ್ಲಿಸುವ ಪ್ರಯತ್ನ ಮಾಡಲಾಯಿತು.
ವಿಶ್ವದ ಆನೇಕ ದೊಡ್ಡ ದೊಡ್ಡ ದೇಶಗಳಲ್ಲಿನ ಕೊರೋನಾ ಸಂಕಷ್ಟ ನೋಡಿದರೆ, ಇಂದು ಭಾರತ ನಿಯಂತ್ರಿತ ಸ್ಥಿತಿಯಲ್ಲಿದೆ. ಒಂದೂವರೆ ತಿಂಗಳ ಹಿಂದೆ ಅನೇಕ ದೇಶಗಳು ಕೊರೋನಾ ಸಾಂಕ್ರಾಮಿಕತೆಯಲ್ಲಿ ದೇಶಕ್ಕೆ ಸಮನಾಗಿದ್ದವು. ಇಂದು ಆ ದೇಶಗಳಲ್ಲಿ ಶೇ. 30ರಷ್ಟು ಹೆಚ್ಚು ಪ್ರಕರಣಗಳಿವೆ. ಸಾವಿರಾರು ಜನರು ಮೃತರಾಗಿದ್ದಾರೆ.
ಭಾರತ ಸಮಯಕ್ಕೆ ಸರಿಯಾಗಿ ಸಮಗ್ರ ಕ್ರಮ ಕೈಗೊಳ್ಳದಿದ್ದಲ್ಲಿ, ಇಂದು ದೇಶದ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಕೂಡ ಭಯವಾಗುತ್ತದೆ. ಆದರೆ, ನಾವು ಈಗ ಆರಿಸಿಕೊಂಡಿರುವ ಕ್ರಮ ಇಂದಿನ ಪರಿಸ್ಥಿತಿಯಲ್ಲಿ ಸರಿಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಲಾಕ್ ಡೌನ್ ನಿಂದ ದೇಶಕ್ಕೆ ಬಹಳ ಲಾಭವಾಗಿದೆ.
ಕೇವಲ ಆರ್ಥಿಕ ದೃಷ್ಟಿಯಿಂದ ನೋಡಿದರೆ ಇದು ದುಬಾರಿಯಾಗಿದೆ. ಬಹಳಷ್ಟು ದರ ತೆರಬೇಕಾಗಿದೆ. ಆದರೆ, ಭಾರತೀಯರ ಜೀವನದ ಮುಂದೆ ಇದನ್ನು ಹೋಲಿಸಲಾಗದು. ವಿಶ್ವಾದ್ಯಂತ ದೇಶ ತೆಗೆದುಕೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಯುತ್ತಿದೆ.
ರಾಜ್ಯ ಸರ್ಕಾರಗಳು ಕೂಡ ಇದರಲ್ಲಿ ಜವಾಬ್ದಾರಿಯಿಂದ ಪಾಲ್ಗೊಂಡಿವೆ. ಈ ಎಲ್ಲಾ ಪ್ರಯತ್ನಗಳನಡುವೆಯೂ ಕೊರೋನಾ ವೇಗವಾಗಿ ಹರಡುತ್ತಿದೆ. ವಿಶ್ವಾದ್ಯಂತ ಆರೋಗ್ಯ ತಜ್ಞರು ಮತ್ತು ಸರ್ಕಾರಗಳಿಗೆ ಮತ್ತಷ್ಟು ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೂಡ ಕೊರೋನಾ ವಿರುದ್ಧ ಹೋರಾಟ ಮುಂದುವರಿಸಬೇಕು, ಹೇಗೆ ವಿಜಯಿಯಾಗಬೇಕು, ಜನರ ಕಷ್ಟ ಕಡಿಮೆಗೊಳಿಸುವುದು ಹೇಗೆ ಎಂಬುದರ ಕುರಿತು ತಾವು ಸರ್ಕಾರಗಳೊಂದಿಗೆ ನಿರಂತರ ಚರ್ಚೆ ನಡೆಸಿದ್ದೇನೆ.
ಈ ಚರ್ಚೆಯಲ್ಲಿ ಪ್ರತಿ ರಾಜ್ಯ ಸರ್ಕಾರಗಳು, ನಾಗರಿಕರು ಲಾಕ್ ಡೌನ್ ವಿಸ್ತರಣೆಯ ಸಲಹೆ ಬರುತ್ತಿದೆ. ಎಲ್ಲಾ ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಭಾರತದಲ್ಲಿ ಮೇ 3ರವರೆಗೆ ವಿಸ್ತರಿಸಲಾಗುವುದು. ಅಂದರೆ ಮೇ 3ರವರೆಗೆ ಪ್ರತಿ ದೇಶದ ಜನರು ಲಾಕ್ ಡೌನ್ ನಲ್ಲಿಯೇ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಇಷ್ಟು ದಿನ ಪಾಲಿಸಿದಂತೆಯೇ ನಿಯಮ ಪಾಲಿಸಬೇಕು.
ಪ್ರಧಾನಿಯ ಸಪ್ತ ಸೂತ್ರಗಳು:
- ಮನೆಯ ಹಿರಿಯ ಬಗ್ಗೆ ಕಾಳಜಿ ವಹಿಸಿ,
- ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ
- ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮಾರ್ಗಸೂಚಿ ಪಾಲಿಸಿ
- ಕೊರೋನಾ ನಿಯಂತ್ರಣಕ್ಕೆ ಆರೋಗ್ಯಸೇತು ಆ್ಯಪ್ ಡೌನ್ ಲೋಡ್ ನೀಡಿ
- ನಿರ್ಗತಿಕರು, ಬಡವರಿಗೆ ಸಹಾಯ ಮಾಡಿ
- ನಿಮ್ಮ ಜೊತೆಗೆ ಕೆಲಸ ಮಾಡುವವರನ್ನು ನೌಕರಿಯಿಂದ ತೆಗೆಯದಿರಿ
- ಆರೋಗ್ಯ, ಶುಚಿತ್ವ ಕಾರ್ಯಕರ್ತರ ಬಗ್ಗೆ ಗೌರವವಿರಲಿ