ದೇಶ

ಭಾರತದ 2 ಜಾತಿಯ ಬಾವಲಿಗಳಲ್ಲಿ ಕೊರೋನಾ ವೈರಸ್ ಪತ್ತೆ: ಐಸಿಎಂಆರ್ ವರದಿ

Srinivasamurthy VN

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಚೀನಾದಲ್ಲಿ ಮಾತ್ರವಲ್ಲ, ಭಾರತದಲ್ಲಿರುವ ಎರಡು ಜಾತಿಯ ಬಾವಲಿಗಳಲ್ಲೂ ಪತ್ತೆಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)​ನ ಸಂಶೋಧಕರು  ಹೇಳಿದ್ದಾರೆ.

ಪ್ರಿಲ್ 13ರಂದು ಐಸಿಎಂಆರ್​ ಪ್ರಕಟಿಸಿರುವ ಜರ್ನಲ್​ನಲ್ಲಿ  ಈ ವರದಿ ಪ್ರಕಟವಾಗಿದ್ದು, ವಿಶ್ವಾದ್ಯಂತ ಈಗಾಗಲೇ 2ಲಕ್ಷಕ್ಕೂ ಅಧಿಕ ಮಂದಿಯನ್ನು ಭಾದಿಸುತ್ತಿರುವ ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ವಿಶ್ವಾದ್ಯಂತ ಹಲವು ದೇಶಗಳ ವಿಜ್ಞಾನಿಗಳು ಸಂಶೋಧನೆ  ಕೈಗೊಂಡಿದ್ದು, ಈ ಪೈಕಿ ಭಾರತೀಯ ವಿಜ್ಞಾನಿಗಳೂ ಮುಂಚೂಣಿಯಲ್ಲಿದ್ದಾರೆ. ವೈರಸ್ ಗುಣಲಕ್ಷಣಗಳು ಅದರ ಮೂಲಗಳನ್ನು ಹುಡುಕುತ್ತಿದ್ದ ವಿಜ್ಞಾನಿಗಳಿಗೆ ಇದೀಗ ಅಚ್ಚರಿ ಅಂಶ ತಿಳಿದುಬಂದಿದ್ದು, ಭಾರತದಲ್ಲಿರುವ ಎರಡು ಜಾತಿಯ ಬಾವಲಿಗಳ ಕೊರೋನಾ ವೈರಸ್ ನ ಗುಣಲಕ್ಷಣಗಳು  ಪತ್ತೆಯಾಗಿದೆ. ಅಂತೆಯೇ ಈ ಬಾವಲಿಗಳು ಸೋಂಕುಗಳನ್ನ ಹರಡುವ ಮತ್ತು ಸಂರಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಬಾವಲಿಗಳು ಈ ವೈರಸ್ ಅನ್ನು ಮಾನವರಿಗೆ ಪ್ರಸರಿಸುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್  ವೈರಾಲಜಿ ವಿಜ್ಞಾನಿ ಡಾ.ಪ್ರಗ್ಯಾ ಡಿ ಯಾದವ್ ಹೇಳಿದ್ದಾರೆ.

ಕೇರಳ, ಕರ್ನಾಟಕ, ಹಿಮಾಚಲ ಪ್ರದೇಶ, ಪುದಚೇರಿ ಮತ್ತು ತಮಿಳುನಾಡು ಸೇರಿದಂತೆ ದೇಶದ 7 ರಾಜ್ಯಗಳಿಂದ ತರಲಾಗಿದ್ದ ಸುಮಾರು 25 ಜಾತಿಯ ಬಾವಲಿಗಳನ್ನು ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸಿದ್ದು, ಈ ಪೈಕಿ ಸ್ಟೆರೊಪಸ್ ಮತ್ತು ರೌಸೆಟ್ಟಸ್ ಎಂಬ 2 ಜಾತಿಯ  ಬಾವಲಿಗಳಲ್ಲಿ ಮಾತ್ರ ಕೊರೋನಾ ವೈರಸ್ ಲಕ್ಷಣಗಳು ಕಂಡುಬಂದಿವೆ. ಬಾವಲಿಗಳ ಗಂಟಲು ಮತ್ತು ಬಾಯಿಯ ಜೊಲ್ಲು ತೆಗೆದು ಅದನ್ನು ಪರೀಕ್ಷಿಸಲಾಗಿತ್ತು. ಈ ಪೈಕಿ ಕರ್ನಾಟಕ, ಚಂಡೀಗಢ, ಪಂಜಾಬ್, ತೆಲಂಗಾಣ, ಗುಜರಾತ್ ಮತ್ತು ಒಡಿಶಾದಿಂದ ತರಲಾಗಿದ್ದ ಬಾವಲಿಗಳಲ್ಲಿ  ಕೊರೋನಾ ವೈರಸ್ ಲಕ್ಷಣಗಳಿರಲಿಲ್ಲ. ಕೇವಲ ಕೇರಳ, ಹಿಮಾಚಲ ಪ್ರದೇಶ, ಪುದಚೇರಿ ಮತ್ತು ತಮಿಳುನಾಡು ರಾಜ್ಯಗಳ ಸ್ಟೆರೊಪಸ್ ಮತ್ತು ರೌಸೆಟ್ಟಸ್ ಜಾತಿಯ ಬಾವಲಿಗಳಲ್ಲಿ ವೈರಸ್ ಲಕ್ಷಣ ಗೋಚರವಾಗಿತ್ತು ಎಂದು ಡಾ.ಪ್ರಗ್ಯಾ ಡಿ ಯಾದವ್ ಹೇಳಿದ್ದಾರೆ.

ಸಾಕಷ್ಟು ಬಗೆಯ ವೈರಸ್​​ಗಳ ನೃಸರ್ಗಿಕ ಮೂಲ ಬಾವಲಿಗಳೇ.. ಹೀಗಾಗಿ ಬಾವಲಿಗಳನ್ನು ವೈರಸ್ ಗಳ ನೈಸರ್ಗಿಕ ದಾಸ್ತಾನು ಎಂದೂ ಕರೆಯಲಾಗುತ್ತದೆ. ಇನ್ನು ಭಾರತದಲ್ಲಿ 119 ಜಾತಿಯ ಬಾವಲಿಗಳಿದ್ದು, ಕಳೆದ ಎರಡು ವರ್ಷಗಳ ಹಿಂದೆ ಕೇರಳದಲ್ಲಿ ಬಾವಲಿಗಳಿಂದ ನಿಫಾ ವೈರಸ್​  ಹರಡಿತ್ತು. ಸಿವಿಯರ್​ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್​​ ಕೊರೊನಾ ವೈರಸ್​-2 (SARS-CoV-2 ದಿಂದ ಉಂಟಾಗುವ ಕೊರೊನಾವೈರಸ್​ ಸೋಂಕು​(Covid-19) ಕೂಡ ಬಾವಲಿಗಳಲ್ಲಿ ಕಾಣಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ಬಾವಲಿಗಳಿಂದ ಮಾನವನಿಗೆ ವೈರಸ್ ಹರಡುವಿಕೆ ತುಂಬಾ ಅಪರೂಪ. ಆದರೆ ಆಕಸ್ಮಿಕ ಘಟನೆಗಳಲ್ಲಿ ಮಾನವರು ಬಾವಲಿಗಳ ಸಂಪರ್ಕಕ್ಕೆ ಬಂದಾಗ ವೈರಸ್ ಪ್ರಸರಣ ಬಾವಲಿಯಿಂದ ಮನುಷ್ಯರಿಗೆ ತಗುಲುತ್ತದೆ.ಅಂತೆಯೇ ಬಾವಲಿಗಳಿಂದ ಪ್ರಾಣಿಗಳಿಗೂ ವೈರಸ್  ಸೋಂಕು ಪ್ರಸರಣ ಅಲ್ಲಗಳೆಯುವಂತಿಲ್ಲ. ಹೀಗಾಗಿ ಬಾವಲಿಗಳ ಮೇಲೆ ಸೂಕ್ಷ್ಮ ನಿಗಾ ಅತ್ಯಗತ್ಯ. ಈ ಹಿಂದೆ ಸ್ಟೆರೋಪಸ್ ಎಂಬ ಬಾವಲಿಯಲ್ಲಿ 2018 ಮತ್ತು 2019ರಲ್ಲಿ ಕೇರಳದಲ್ಲಿ ಅಬ್ಬರಿಸಿದ್ದ ನಿಫಾಹ್ ವೈರಸ್ ಕಂಡುಬಂದಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

SCROLL FOR NEXT