ದೇಶ

ಮುಂಬೈ ಬಾಂದ್ರಾ ನಿಲ್ದಾಣದಲ್ಲಿ ಸೇರುವಂತೆ ವಲಸೆ ಕಾರ್ಮಿಕರಿಗೆ ಪ್ರಚೋದನೆ: ವಿನಯ್ ದುಬೆ ಬಂಧನ

Sumana Upadhyaya

ಮುಂಬೈ: ಸುಳ್ಳು ವದಂತಿ ಹಬ್ಬಿಸಿ ಪ್ರಚೋದನೆ ನೀಡಿ ಸಾವಿರಾರು ವಲಸಿಗರು ನಿನ್ನೆ ಮುಂಬೈಯ ಬಾಂದ್ರಾ ನಿಲ್ದಾಣದಲ್ಲಿ ಸೇರುವಂತೆ ಮಾಡಿದ ವಿನಯ್ ದುಬೆಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಸ್ವಘೋಷಿತ ಕಾರ್ಮಿಕ ನಾಯಕನಾಗಿರುವ ವಿನಯ್ ದುಬೆ ಸೋಷಿಯಲ್ ಮೀಡಿಯಾಗಳಲ್ಲಿ ಚಲೋ ಘರ್ ಕಿ(ಮನೆಗೆ ಹೋಗೋಣ)ಎಂಬ ಅಭಿಯಾನವನ್ನು ಆರಂಭಿಸಿದ್ದರು. ಇದರಿಂದ ಕೊರೋನಾ ವೈರಸ್ ಲಾಕ್ ಡೌನ್ ನಿಂದ ಅಲ್ಲಲ್ಲೇ ಸಿಕ್ಕಿಹಾಕಿಕೊಂಡಿದ್ದ ವಲಸಿಗರು ತಮ್ಮ ತಮ್ಮ ಊರುಗಳಿಗೆ ಹೋಗಲು ಪ್ರಚೋದಿಸಿದ್ದ. ಈ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿತ್ತು.

ವಿನಯ್ ದುಬೆ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹಾಕಿರುವ ಪೋಸ್ಟ್ ನಿಂದಾಗಿ ಪ್ರಚೋದನೆ ಸಿಕ್ಕಿ ಲಾಕ್ ಡೌನ್, ಸಾಮಾಜಿಕ ಅಂತರದ ನಿಯಮ ಮೀರಿ ಬಾಂದ್ರಾ ರೈಲು ನಿಲ್ದಾಣದ ಹತ್ತಿರ ಬಂದು ತಮ್ಮ ಊರುಗಳಿಗೆ ಹೋಗಲು ಪ್ರಯತ್ನಿಸಿದರೇ ಎಂಬ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಬಾಂದ್ರಾ ರೈಲು ನಿಲ್ದಾಣದ ಹತ್ತಿರ ಸಾವಿರಾರು ಜನರು ಸೇರಿದ್ದರಿಂದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಗಿ ಬಂತು. ವಲಸಿಗರಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶಗಳಿಂದ ಬಂದವರು ಹೆಚ್ಚಾಗಿದ್ದರು.

ಏಪ್ರಿಲ್ 14ಕ್ಕೆ 21 ದಿನಗಳ ಲಾಕ್ ಡೌನ್ ಮುಕ್ತಾಯವಾಗುವುದರಿಂದ ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ಹೋಗಲು ಸರ್ಕಾರ ವ್ಯವಸ್ಥೆ ಮಾಡಲಿ, ಅವರವರ ಊರುಗಳಲ್ಲಿ ಕ್ವಾರಂಟೈನ್ ನಲ್ಲಿ ಇರಲಿ, ಇಲ್ಲಿದ್ದರೆ ಅವರಿಗೆ ಊಟ, ತಿಂಡಿಗೂ ಕಷ್ಟವಾಗುತ್ತದೆ, ಬದುಕಲು ದುಸ್ತರವಾಗುತ್ತದೆ, ಏಪ್ರಿಲ್ 14, 15ರವರೆಗೆ ಕಾಯುತ್ತೇವೆ, ಸರ್ಕಾರ ವ್ಯವಸ್ಥೆ ಮಾಡದಿದ್ದರೆ ನಾನು ವಲಸೆ ಕಾರ್ಮಿಕರ ಜೊತೆ ಕಾಲ್ನಡಿಗೆಯಲ್ಲಿ ಊರಿಗೆ ಹೋಗುತ್ತೇವೆ ಎಂದು ವಿನಯ್ ದುಬೆ ಬೆದರಿಕೆ ಹಾಕಿದ್ದರು. ಈ ಕುರಿತು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ರವಾನಿಸಿದ್ದರು.

ಉತ್ತರ್ ಭಾರ್ತೀಯ ಮಹಾ ಪಂಚಾಯತ್ ಎಂಬ ಎನ್ ಜಿಒ ನಡೆಸುತ್ತಿರುವ ವಿನಯ್ ದುಬೆ ಮಹಾರಾಷ್ಟ್ರದಲ್ಲಿ ಉತ್ತರ ಭಾರತದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದರು.

SCROLL FOR NEXT