ದೇಶ

'ಹೃದಯಹೀನ ಸರ್ಕಾರ': ಬಡವರಿಗೆ ಉಚಿತ ಆಹಾರ, ಹಣ ನೀಡಿ ಎಂದು ಪಿ ಚಿದಂಬರಂ ಆಗ್ರಹ

Srinivasamurthy VN

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಬಡವರಿಗೆ ಏನೂ ಮಾಡದ ಮೋದಿ ಸರ್ಕಾರ ಹೃದಯಹೀನವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಹೇಳಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ಕುರಿತಂತೆ ಟ್ವಿಟರ್ ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಪಿ ಚಿದಂಬರಂ ಅವರು, ಲಾಕ್‌ಡೌನ್‌ನ ಸಂದರ್ಭದಲ್ಲಿ ಬಡವರಿಗಾಗಿ ಏನನ್ನೂ ಮಾಡದ ಕೇಂದ್ರ ಸರಕಾರ ಹೃದಯಹೀನವಾಗಿದೆ. ಬಹಳಷ್ಟು ಜನರು ಕೈಯಲ್ಲಿ ಹಣವಿಲ್ಲದೆ  ಹತಾಶರಾಗಿದ್ದಾರೆ. ಉಚಿತ ಆಹಾರ ಪಡೆಯಲು ಉದ್ದನೆಯ ಸರದಿ ಸಾಲಿನಲ್ಲಿ ನಿಂತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಎಲ್ಲ ಬಡ ಕುಟುಂಬಗಳಿಗೆ ನಗದು ವರ್ಗಾವಣೆ ಮಾಡುವ ಮೂಲಕ ಜನರ ಹಸಿವು ನೀಗಿಸಿ ಅವರ ಘನತೆ ಕಾಪಾಡಬೇಕು. 77 ದಶಲಕ್ಷ ಟನ್‌ ಆಹಾರ ಧಾನ್ಯದ  ಸಣ್ಣದೊಂದು ಭಾಗವನ್ನು ಎಫ್‌ಸಿಐ ಮೂಲಕ ಜನರಿಗೆ ಉಚಿತವಾಗಿ ನೀಡಿದರೆ ಅವರಿಗೆ ಉಪಕಾರವಾದೀತು. ಕೇವಲ ಹೃದಯಹೀನ ಸರಕಾರ ಮಾತ್ರ ಏನನ್ನೂ ಮಾಡದೆ ಈ ರೀತಿ ನಿಂತಿರಲು ಸಾಧ್ಯ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರಕ್ಕೆ 2 ಪ್ರಶ್ನೆ ಕೇಳಿರುವ ಚಿದಂಬರಂ, ಸರಕಾರ ಜನರನ್ನು ಹಸಿವಿನಿಂದ ಏಕೆ ರಕ್ಷಿಸಲು ಮುಂದಾಗುತ್ತಿಲ್ಲ. ಪ್ರತಿ ಬಡ ಕುಟುಂಬಕ್ಕೆ ನಗದು ಹಣವನ್ನು ವರ್ಗಾಯಿಸುವ ಮೂಲಕ ತನ್ನ ಘನತೆಯನ್ನು ಏಕೆ ಕಾಪಾಡಿಕೊಳ್ಳುತ್ತಿಲ್ಲ? 77 ಮಿಲಿಯನ್ ಟನ್ ಧಾನ್ಯದಲ್ಲಿ  ಸ್ವಲ್ಪ ಭಾಗವನ್ನು ಸರಕಾರವು ಎಫ್‌ಸಿಐ ಮೂಲಕ ಹಸಿವಿನಿಂದ ಕಂಗಾಲಾಗಿರುವ ಕುಟುಂಬಗಳಿಗೆ ಉಚಿತವಾಗಿ ಏಕೆ ವಿತರಿಸುತ್ತಿಲ್ಲ?ಎಂದು ಪ್ರಶ್ನಿಸಿದ್ದಾರೆ.

ಅಂತೆಯೇ ಪಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರ ಕಾರ್ಯವೈಖರಿಯನ್ನು ಟೀಕಿಸಿದ ಚಿದಂಬರಂ, ನನ್ನ ಈ ಎರಡು ಪ್ರಶ್ನೆಗಳು ಆರ್ಥಿಕ ಹಾಗೂ ನೈತಿಕ ಪ್ರಶ್ನೆಯಾಗಿವೆ. ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ನನ್ನ ಪ್ರಶ್ನೆಗೆ  ಉತ್ತರಿಸಲು ವಿಫಲರಾಗಿದ್ದಾರೆ. ದೇಶ ಅಸಹಾಯಕವಾಗಿ ನೋಡುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT