ಕೋವಿಡ್-19 ಸೋಂಕು: ಮೃತ ವೈದ್ಯರ ಅಂತ್ಯಕ್ರಿಯೆ ವಿರೋಧಿಸಿದ 20 ಮಂದಿಯ ಬಂಧನ!
ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೆ ವಿರೋಧಿಸಿದ 20 ಮಂದಿಯನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ: ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೆ ವಿರೋಧಿಸಿದ 20 ಮಂದಿಯನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ನಲ್ಲಿ ಈ ಘಟನೆ ನಡೆದಿದೆ. 55 ವರ್ಷದ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆ ನಡೆಸುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಆರೋಗ್ಯ ಅಧಿಕಾರಿಗಳಿದ್ದ ಆಂಬುಲೆನ್ಸ್ ಮೇಲೆ ದಾಳಿಯನ್ನೂ ನಡೆಸಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಪ್ರತಿಭಟನಾ ನಿರತ 20 ಜನರನ್ನು ಬಂಧಿಸಿದ ನಂತರ ಅಂತ್ಯಕ್ರಿಯೆ ನಡೆದಿದೆ. ನಗರದಲ್ಲಿ ಈ ರೀತಿ ನಡೆದಿರುವ 2 ನೇ ಘಟನೆ ಇದಾಗಿದೆ.
ಕೆಲವು ದಿನಗಳ ಹಿಂದೆ ನೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಕೋವಿಡ್-19 ರಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆ ನಡೆಸಲು ಸ್ಥಳೀಯರು ವಿರೋಧಿಸಿದ್ದರು. ಈಗ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗಿರುವುದು ವೈದ್ಯಕೀಯ ಸಮುದಾಯಕ್ಕೆ ಆಘಾತ ಉಂಟುಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.