ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಒಂದು ಕೊರೋನಾ ಸೋಂಕಿತ ಪ್ರಕರಣ ವರದಿಯಾಗಿದ್ದು, 125 ಕುಟುಂಬಗಳನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ.
ರಾಷ್ಟ್ರಪತಿ ಭವನದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಈ ವ್ಯಕ್ತಿಯ ತಾಯಿ ಕಳೆದ ವಾರ ಕೊರೋನಾ ಸೋಂಕಿಗೆ ಮೃತಪಟ್ಟಿದ್ದರು. ಹೀಗಾಗಿ ಅವರ ಮನೆಯನ್ನು ಕಳೆದ ಶನಿವಾರದಿಂದ ಸೀಲ್ಡೌನ್ ಮಾಡಲಾಗಿದ್ದು, ಇಡೀ ಕುಟುಂಬವನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ.
ಅದೇ ದಿನ ಆ ಸಿಬ್ಬಂದಿಯ ಅಕ್ಕಪಕ್ಕದ 30 ಮನೆಗಳ ಸದಸ್ಯರನ್ನು ತೀವ್ರ ಕ್ವಾರಂಟೈನ್ ನಲ್ಲಿರಿಸಿ ಸರ್ಕಾರದಿಂದಲೇ ಆಹಾರ ಪೂರೈಸಲಾಗುತ್ತಿದೆ. ಈಗಿನ ಬೆಳವಣಿಗೆಯ ನಂತರ ಮತ್ತೆ 95 ಕುಟುಂಬಗಳನ್ನು ಹೋಂ ಕ್ವಾರಂಟೈನ್ ಗೊಳಿಸಲಾಗಿದ್ದು, ಯಾರೊಬ್ಬರನ್ನೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.
ಇತ್ತೀಚಿನ ವರದಿ ಪ್ರಕಾರ, ರಾಷ್ಟ್ರಪತಿ ಭವನದಲ್ಲಿರುವ ಸುಮಾರು 125 ಕುಟುಂಬಗಳ ಸುಮಾರು 500 ಮಂದಿ ಇದೀಗ ಸ್ವ ನಿರ್ಬಂಧದಲ್ಲಿದ್ದಾರೆ. ಈ ಕುರಿತು ರಾಷ್ಟ್ರಪತಿ ಭವನದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.