ದೇಶ

ಮುಸ್ಲಿಮರು ಮತ್ತು ಅಲ್ಪಸಂಖ್ಯಾತರಿಗೆ ಭಾರತ ಸ್ವರ್ಗ: ಮುಖ್ತರ್ ಅಬ್ಬಾಸ್ ನಖ್ವಿ

Lingaraj Badiger

ನವದೆಹಲಿ: ಮುಸ್ಲಿಮರಿಗೆ ಭಾರತ ಸ್ವರ್ಗವಾಗಿದೆ. ಅವರನ್ನು 'ದಾರಿ ತಪ್ಪಿಸಲು' ಪ್ರಯತ್ನಿಸುವವರು ಅವರ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದ್ದಾರೆ.

ಮುಸ್ಲಿಮರ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಅವರ ವಿರುದ್ಧದ ದಾಳಿಯ ಘಟನೆಗಳನ್ನು ತಡೆಯುವಂತೆ ಒಐಸಿ (ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್) ಭಾರತವನ್ನು ಒತ್ತಾಯಿಸಿದ ನಂತರ ನಖ್ವಿ ಅವರ ಈ ಹೇಳಿಕೆ ಹೊರಬಿದ್ದಿದೆ.

ಒಐಸಿಯ ಈ ಟೀಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ನಖ್ವಿ, ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗಲೆಲ್ಲಾ 130 ಕೋಟಿ ಭಾರತೀಯರ ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ಅವರು ಜನರನ್ನು ಯಾವಾಗಲೂ ಸಮಾನವಾಗಿ ಕಾಣುತ್ತಾರೆ ಎಂದು ಹೇಳಿದರು.

ಅಂತಹ ಆರೋಪಗಳನ್ನು ಮಾಡುವ ಜನರಿಗೆ ಇಲ್ಲಿನ ನೈಜತೆಗಳ ಬಗ್ಗೆ ತಿಳಿದಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಮುಸ್ಲಿಮರು, ಅಲ್ಪಸಂಖ್ಯಾತರು ಇಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ಶಾಂತಿ ಮತ್ತು ಅಭ್ಯುದಯದ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುವವರು ಅವರಿಗೆ ಒಳ್ಳೆಯದನ್ನು ಮಾಡುತ್ತಿಲ್ಲ . ಅವರು ಭಾರತೀಯ ಮುಸ್ಲಿಮರಿಗೆ ಸ್ನೇಹಿತರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ತಪ್ಪು ಮಾಹಿತಿ ಹರಡುವ ಗುರಿಯನ್ನು ಹೊಂದಿರುವ ಯಾವುದೇ ರೀತಿಯ ನಕಲಿ ಸುದ್ದಿ ಮತ್ತು ಪಿತೂರಿಗಳ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು ಎಂದು ನಖ್ವಿ ತಿಳಿಸಿದರು.

ಜಾತ್ಯತೀತತೆ ಮತ್ತು ಸಾಮರಸ್ಯ" ಒಂದು "ರಾಜಕೀಯ ಫ್ಯಾಷನ್" ಅಲ್ಲ, ಆದರೆ ಭಾರತ ಮತ್ತು ಭಾರತೀಯರಿಗೆ "ಪರಿಪೂರ್ಣ ಉತ್ಸಾಹ" ಎಂದು ಅವರು ಪ್ರತಿಪಾದಿಸಿದರು.

ಒಗ್ಗೂಡುವ ಸಂಸ್ಕೃತಿ ಮತ್ತು ಬದ್ಧತೆಯು ವೈವಿಧ್ಯತೆಯಲ್ಲಿ ಏಕತೆಯೊಂದಿಗೆ ದೇಶವನ್ನು ಒಂದುಗೂಡಿಸಿದೆ ಎಂದು ಸಚಿವರು  ಹೇಳಿದರು.

SCROLL FOR NEXT