ದೇಶ

ಕೊರೋನಾ ವೈರಸ್: ಸಿಬ್ಬಂದಿಗೆ ಸೋಂಕು, ವಿಮಾನಯಾನ ಸಚಿವಾಲಯ ಬಂದ್, ಸಹೋದ್ಯೋಗಿಗಳ ಕ್ವಾರಂಟೈನ್

Srinivasamurthy VN

ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಇದೀಗ ವಿಮಾನಯಾನ ಸಚಿವಾಲಯದ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಇವರ ಸಹೋದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಹೌದು.. ಈ ಹಿಂದೆ ಲೋಕಸಭಾ ಸಿಬ್ಬಂದಿಯಲ್ಲಿ ಕಾಣಿಸಿಕೊಂಡಿದ್ದ ವೈರಸ್ ಸೋಂಕು, ಇದೀಗ ವಿಮಾನಯಾನ ಸಚಿವಾಲಯಕ್ಕೂ ಹಬ್ಬಿದೆ. ವಿಮಾನಯಾನ ಸಚಿವಾಲಯದ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಇಡೀ ಸಚಿವಾಲವನ್ನು ಸೀಲ್ ಡೌನ್ ಮಾಡಲಾಗಿದೆ.  ಅಲ್ಲದೆ ಸಿಬ್ಬಂದಿಯ ಸಹೋದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಈ ಬಗ್ಗೆ ಸಚಿವಾಲಯ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದು, ಏಪ್ರಿಲ್ 15ರಂದು ಸಿಬ್ಬಂದಿಯನ್ನು ಕೊರೋನಾ ವೈರಸ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ವರದಿಯಲ್ಲಿ ವೈರಸ್ ಪಾಸಿಟಿವ್ ಬಂದಿದೆ. ಹೀಗಾಗಿ ಇಡೀ ಸಚಿವಾಲಯವನ್ನು ಸೀಲ್ ಡೌನ್ ಮಾಡಲಾಗಿದ್ದು,  ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದ ಎಲ್ಲ ಇತರೆ ಸಹೋದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದೆ.

ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಕೂಡ ಟ್ವೀಟ್ ಮಾಡಿದ್ದು, ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ಪೀಡಿತ ಸಿಬ್ಬಂದಿಗೆ ಚಿಕಿತ್ಸೆ ಮುಂದುವರೆದಿದೆ. ಅವರ ಕುಟುಂಬಕ್ಕೆ ಸರ್ಕಾರ ನೈತಿಕ ಬೆಂಬಲ ನೀಡಲಿದೆ  ಎಂದು ಹೇಳಿದ್ದಾರೆ. 

SCROLL FOR NEXT