ದೇಶ

ನೂತನ ಶಿಕ್ಷಣ ನೀತಿಗೆ ತಮಿಳುನಾಡು ವಿರೋಧ: ತ್ರಿಭಾಷಾ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದ ಸಿಎಂ ಪಳನಿ ಸ್ವಾಮಿ

Srinivasamurthy VN

ಚೆನ್ನೈ: ಕೇಂದ್ರ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ನೂತನ ಶಿಕ್ಷಣ ನೀತಿಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಪಳನಿ ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಪಳನಿಸ್ವಾಮಿ ಅವರು, '2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಮೂರು ಭಾಷಾ ಸೂತ್ರವು ನೋವಿನ ಹಾಗೂ ಬೇಸರದ ವಿಚಾರವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಅಣ್ಣಾ ದೊರೈ, ಎಂಜಿಆರ್ ಹಾಗೂ ಜಯಲಲಿತಾ ಅವರು ಹಿಂದಿ ಭಾಷಾ  ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದರು. ಮೂರು ಭಾಷೆಗಳ ನೀತಿಯನ್ನು ಮರು ಪರಿಶೀಲನೆ ನಡೆಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಪಳನಿ ಸ್ವಾಮಿ ವಿನಂತಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, 'ಎನ್‌ಇಪಿಯಲ್ಲಿನ ಮೂರು ಭಾಷೆಯ ಸೂತ್ರವು ನೋವಿನ ಹಾಗೂ ಬೇಸರದ ವಿಚಾರ. ತಮಿಳುನಾಡು ಸರ್ಕಾರ ಯಾವುದೇ ಕಾರಣಕ್ಕೂ ಕೇಂದ್ರದ ತ್ರಿಭಾಷಾ ನೀತಿಗೆ ಬೆಂಬಲ ನೀಡುವುದಿಲ್ಲ. ರಾಜ್ಯದಲ್ಲಿ ದಶಕಗಳಿಂದ ದ್ವಿಭಾಷಾ ಸೂತ್ರ ನೀತಿ ಜಾರಿಯಲ್ಲಿದೆ.  ಇದನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಇದನ್ನು ಮರುಪರಿಗಣಿಸುವಂತೆ ವಿನಂತಿಸುತ್ತೇನೆ. 1965ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವು ಹಿಂದಿಯನ್ನು ಅಧಿಕೃತ ಭಾಷೆಯಾಗಿ ಹೇರುವ ಪ್ರಯತ್ನ ಮಾಡಿದಾಗ ತಮಿಳುನಾಡಿನ ವಿದ್ಯಾರ್ಥಿಗಳು ಹಿಂದಿ  ವಿರೋಧಿ ಪ್ರತಿಭಟನೆ ನಡೆಸಿದ್ದರು ಎಂದು ಪಳನಿಸ್ವಾಮಿ ಹೇಳಿದರು.

ಇನ್ನು ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ‌ನೇತೃತ್ವದ ಡಿಎಂಕೆ ಸಹಿತ ಹಲವು ವಿಪಕ್ಷಗಳು ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿದ್ದು, ಎನ್‌ಇಪಿ ಪಾಲಿಸಿ ಪ್ರಸ್ತಾವಿಸಿರುವ ವ್ಯಾಪಕ ಸುಧಾರಣೆಗಳ ವಿಮರ್ಶೆ ಕುರಿತು ಮಾಹಿತಿ ಕೇಳಿವೆ.

ಮೂರು ಭಾಷೆಗಳ ನೀತಿಯಲ್ಲಿ ಯಾವ ಭಾಷೆ ಆಯ್ಕೆ ಮಾಡಬೇಕೆನ್ನುವುದನ್ನು ರಾಜ್ಯಗಳೇ ನಿರ್ಧರಿಸಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ, ತಮಿಳುನಾಡಿನ ಪ್ರಕಾರ ಇದು ಕೇಂದ್ರ ಸರಕಾರದಿಂದ ಹಿಂದಿಯನ್ನು ಹೇರುವ ಪ್ರಯತ್ನ ವಾಗಿದೆ. ಕೇಂದ್ರ ಸರಕಾರ ಯಾವುದೆ ಭಾಷೆಯನ್ನು ಯಾವುದೇ ರಾಜ್ಯಕ್ಕೆ  ಹೇರುವುದಿಲ್ಲ ಎಂದು ತಮಿಳುನಾಡಿನ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್‌ಗೆ ಟ್ವೀಟ್ ಮೂಲಕ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೊಖ್ರಿಯಾಲ್ ತಿಳಿಸಿದ್ದಾರೆ.

SCROLL FOR NEXT