ದೇಶ

ಸಚಿನ್ ಪೈಲಟ್ ಗೆ ಕಾಂಗ್ರೆಸ್ ನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲವಿದೆ: ಗೆಹ್ಲೂಟ್ ಕ್ಯಾಂಪ್ ಶಾಸಕನ ಹೇಳಿಕೆ

Srinivasamurthy VN

ಜೈಸಲ್ಮೇರ್: ಕಾಂಗ್ರೆಸ್ ನ ರೆಬೆಲ್ ನಾಯಕ ಸಚಿನ್ ಪೈಲಟ್ ಅವರಿಗೆ ಅವರ ನಿರೀಕ್ಷೆಗಿಂತಲೂ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಸಿಎಂ ಅಶೋಕ್ ಗೆಹ್ಲೂಟ್ ಕ್ಯಾಂಪ್ ನಲ್ಲಿರುವ ಶಾಸಕರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಭಿನ್ನಮತ ಸ್ಫೋಟ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದ್ದು, ಸಿಎಂ ಅಶೋಕ್ ಗೆಹ್ಲೂಟ್ ಅವರ ಬೆಂಬಲಿತ ಶಾಸಕರ ಕ್ಯಾಂಪ್ ನಲ್ಲಿರುವ ಶಾಸಕರೊಬ್ಬರು ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕುದುರೆ ವ್ಯಾಪಾರದ ಹಿನ್ನಲೆಯಲ್ಲಿ ಪ್ರಸ್ತುತ ಸಿಎಂ ಅಶೋಕ್ ಗೆಹ್ಲೂಟ್ ಬಣ ತಮ್ಮ ಬೆಂಬಲಿತ ಶಾಸಕರನ್ನು ಜೈಸಲ್ಮೇರ್ ನ ಹೊಟೆಲ್ ನಲ್ಲಿ ತಂಗಿದೆ. ಇದೇ ಕ್ಯಾಂಪ್ ನಲ್ಲಿರುವ ಓರ್ವ ಶಾಸಕ ಸಚಿನ್ ಪೈಲಟ್ ಅವರಿಗೆ ಕಾಂಗ್ರೆಸ್ ನಲ್ಲಿ ಅವರ ನಿರೀಕ್ಷೆಯನ್ನೂ ಮೀರಿದ ಬೆಂಬಲವಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಸಚಿನ್ ಪೈಲಟ್ ಬಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಶಾಸಕ ಪ್ರಶಾಂತ್ ಬೈರ್ವಾ ಈ ಮಾತನ್ನು ಹೇಳಿದ್ದು, ಸಚಿನ್ ಪೈಲಟ್ ಅವರ ನಿರೀಕ್ಷೆಯನ್ನೂ ಮೀರಿ ಸಾಕಷ್ಟು ಶಾಸಕರು ಅವರ ಬೆಂಬಲಕ್ಕೆ ಇದ್ದಾರೆ. ಅವರಿಗೆ ಈಗಿರುವ ಕೇವಲ 18 ಶಾಸಕರು ಮಾತ್ರವಲ್ಲ 40 ರಿಂದ 45 ಶಾಸಕರು ಅವರ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಜೈಸಲ್ಮೇರ್ ನ ಸೂರ್ಯಗಢ್ ಹೊಟೆಲ್ ನಲ್ಲಿ ಆರೋಗ್ಯ ಚೆಕಪ್ ವೇಳೆ ಶಾಸಕರು ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. 

'ರಾಜಸ್ಥಾನ ಕಾಂಗ್ರೆಸ್ ನಲ್ಲಿ ಸಚಿನ್ ಪೈಲಟ್ ಅವರಿಗೆ ದೊಡ್ಡ ಮಟ್ಟದಲ್ಲಿ ಬೆಂಬಲಿಗರಿದ್ದಾರೆ. ಈ ಬಗ್ಗೆ ಅವರು ಯೋಚಿಸಿದ್ದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಶಾಸಕರು ಅವರನ್ನು ಬೆಂಬಲಿಸುತ್ತಾರೆ. ಅವರು ಈಗ ಕೇವಲ 18 ಶಾಸಕರ ಬೆಂಬಲ ಹೊಂದಿದ್ದಾರೆ. ಆದರೆ ಈ ಸಂಖ್ಯೆ ಕಾಂಗ್ರೆಸ್ ನಲ್ಲಿ 40 ರಿಂದ 45ರಷ್ಟಿದೆ. ಸಚಿನ್ ಪೈಲಟ್ ಅವರು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಮ್ಮಂಥಹ ಪ್ರಾಮಾಣಿಕ ಬೆಂಬಲಿಗರ ಸಲಹೆ ಪಡೆಯಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಅವರ ವಿಚಾರದಲ್ಲಿ ಕಾಣದ ವ್ಯಕ್ತಿಗಳು ಆಟವಾಡುತ್ತಿದ್ದಾರೆ. ನಾವು ಅವರ ಬೆಂಬಲಕ್ಕೆ ಇದ್ದೇವೆ ಎನ್ನುವ ಮಾತ್ರಕ್ಕೇ ನಾವು ಕಾಂಗ್ರೆಸ್ ತೊರೆದು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತೇವೆ ಎಂದಲ್ಲ. ನಾವು ಶೇ.100ರಷ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ಕಾಂಗ್ರೆಸ್ ಚಿನ್ಹೆ ಮೂಲಕ ನಾವು ಆರಿಸಿ ಬಂದಿದ್ದು, ಕಾಂಗ್ರೆಸ್ ಪರವಾಗಿಯೇ ಕೆಲಸ ಮಾಡಲಿದ್ದೇವೆ ಎಂದು ಪ್ರಶಾಂತ್ ಬೈರ್ವಾ ಹೇಳಿದ್ದಾರೆ.

ಇನ್ನು ಇದೇ ಆಗಸ್ಟ್ 14ರಂದು ರಾಜಸ್ಥಾನ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಸಿಎಂ ಅಶೋಕ್ ಗೆಹ್ಲೂಟ್ ಸರ್ಕಾರದ ಅಳಿವು-ಉಳಿವು ಅಂದು ನಿರ್ಧಾರವಾಗಲಿದೆ.

SCROLL FOR NEXT