ದೇಶ

ಮನಮೋಹನ್ ಸಿಂಗ್ ರಾಹುಲ್ ಗಾಂಧಿಗೆ ಪ್ರಧಾನಿ ಹುದ್ದೆ ವಹಿಸಿಕೊಳ್ಳಿ ಎಂದು ಹೇಳಿದ್ದರೂ ಕೇಳಿರಲಿಲ್ಲ:ಕಾಂಗ್ರೆಸ್ ವಕ್ತಾರ

Sumana Upadhyaya

ನವದೆಹಲಿ:ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ನೆಹರೂ-ಗಾಂಧಿ ಮನೆತನಕ್ಕೆ ಸೇರದ ಹೊರಗಿನ ಕಾಂಗ್ರೆಸ್ ನಾಯಕರನ್ನು ಅಧ್ಯಕ್ಷ ಸ್ಥಾನಕ್ಕೆ ಕರೆದುಕೊಂಡು ಬರಲಾಗುತ್ತದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, ಗಾಂಧಿ ಕುಟುಂಬವು ಅಧಿಕಾರದ ಮೇಲೆ ಕಣ್ಣಿಡದೆ ಪಕ್ಷಕ್ಕೆ ಸೇವೆ ಸಲ್ಲಿಸಿದೆ ಎಂದಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಯುಪಿಎ-2ನೇ ಅವಧಿಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ರಾಹುಲ್ ಗಾಂಧಿಯವರು ಪ್ರಧಾನಿಯಾಗುವಂತೆ ಒತ್ತಾಯಿಸಿದ್ದರು ಆದರೆ ಆಗ ರಾಹುಲ್ ಗಾಂಧಿಯವರೇ ಬೇಡ, ನೀವೇ 5 ವರ್ಷ ಪೂರ್ಣಾವಧಿ ಪೂರೈಸಿ ಎಂದು ತಿರಸ್ಕರಿಸಿದ್ದರು ಎಂದಿದ್ದಾರೆ. ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷರಾಗಬೇಕು ಎಂಬ ಪ್ರಿಯಾಂಕಾ ಗಾಂಧಿಯವರ ಹೇಳಿಕೆ ಬಗ್ಗೆ ಕೇಳಿದಾಗ ಅದು ವರ್ಷದ ಹಿಂದೆ ಅವರ ಅಭಿಪ್ರಾಯವಾಗಿದ್ದು, ಆಗ ಪರಿಸ್ಥಿತಿ ಬೇರೆಯಿತ್ತು, ಈಗ ಬೇರೆಯಿದೆ ಎಂದಿದ್ದಾರೆ.

ರಾಹುಲ್ ಗಾಂಧಿಯವರು ಪಕ್ಷಕ್ಕಾಗಿ, ವಿರೋಧ ಪಕ್ಷದ ನಾಯಕನಾಗಿ ಸತತ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ತೋರಿಸಲು ಕಾಂಗ್ರೆಸ್ ಗೆ, ದೇಶಕ್ಕೆ ಇಂತಹ ನಾಯಕರ ಅಗತ್ಯವಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮತ್ತೆ ಅಧಿಕಾರ ವಹಿಸಿಕೊಳ್ಳಬೇಕು, ಇಲ್ಲವೇ ಬೇರೊಬ್ಬರನ್ನು ನೇಮಿಸಬೇಕೆಂಬ ಒತ್ತಾಯ ಪಕ್ಷದ ಇತರ ನಾಯಕರು, ಕಾರ್ಯಕರ್ತರಿಂದ ಕೇಳಿಬರುತ್ತಿರುವ ಸಂದರ್ಭದಲ್ಲಿ ವಕ್ತಾರರ ಹೇಳಿಕೆ ಸುದ್ದಿಯಾಗಿದೆ.

SCROLL FOR NEXT