ದೇಶ

ಚೀನಾ ಜೊತೆ ಮಾತುಕತೆಗಳು ವಿಫಲವಾದರೆ ಬೇರೆ ಮಿಲಿಟರಿ ಆಯ್ಕೆಗಳು ಭಾರತದ ಮುಂದಿವೆ:ಜ.ಬಿಪಿನ್ ರಾವತ್

Sumana Upadhyaya

ನವದೆಹಲಿ: ಭಾರತ-ಚೀನಾ ಮಧ್ಯೆ ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳು ವಿಫಲವಾದರೆ ಚೀನಾದ ಉಲ್ಲಂಘನೆ, ಅತಿಕ್ರಮಗಳನ್ನು ಎದುರಿಸಲು ಭಾರತದ ಮುಂದೆ ಮಿಲಿಟರಿ ಆಯ್ಕೆಗಳಿವೆ ಎಂದು ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವ ಲಡಾಕ್ ನಲ್ಲಿ ಚೀನಾ ಸೇನೆಯ ಕಡೆಯಿಂದ ಉಲ್ಲಂಘನೆ, ಸಂಘರ್ಷಗಳನ್ನು ಎದುರಿಸಲು ಬೇರೆಲ್ಲಾ ಆಯ್ಕೆಗಳು ವಿಫಲವಾದರೆ ಮಿಲಿಟರಿ ಆಯ್ಕೆಗಳು ನಮ್ಮ ಮುಂದಿವೆ. ಆದರೆ ಅದನ್ನು ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ವಿಫಲವಾದರೆ ಮಾತ್ರ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹಾಗಾದರೆ ಮಿಲಿಟರಿ ಆಯ್ಕೆಗಳೇನು ಎಂಬುದಕ್ಕೆ ಜನರಲ್ ರಾವತ್ ವಿವರ ನೀಡಲು ನಿರಾಕರಿಸಿದ್ದಾರೆ.

ಚೀನಾ ಸೇನೆಯ ಅತಿಕ್ರಮ ಪ್ರವೇಶದ ಮೂಲಕ ಮೇ 5ರಂದು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಸೇನೆ ನಿಲುಗಡೆಯಿಂದ ಆರಂಭವಾದ ಭಾರತ-ಚೀನಾ ಸಂಘರ್ಷ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗುವುದರೊಂದಿಗೆ ತಾರಕಕ್ಕೇರಿ ಇನ್ನೂ ನಿಂತಿಲ್ಲ.

ಗಡಿ ವಾಸ್ತವ ರೇಖೆಯ ಫಿಂಗರ್ ಪ್ರದೇಶ, ಗಲ್ವಾನ್ ಕಣಿವೆ, ಹಾಟ್ ಸ್ಟ್ರಿಂಗ್ ಮತ್ತು ಕೊಂಗ್ರುಂಗ್ ನಾಲಾ ಪ್ರದೇಶಗಳಲ್ಲಿ ಇನ್ನೂ ಸೇನಾಪಡೆಗಳಿವೆ.

ಕಳೆದ 3 ತಿಂಗಳಿನಿಂದ ಎರಡೂ ದೇಶಗಳ ಮಧ್ಯೆ ಹಲವು ಸುತ್ತಿನ ಸೇನಾ ಮತ್ತು ರಾಜತಾಂತ್ರಿಕ ಸುತ್ತಿನ ಮಾತುಕತೆ ನಡೆಯುತ್ತಲೇ ಇದೆ. ಐದು ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆಗಳು ನಡೆದು ಅವುಗಳಿಂದಲೂ ಪ್ರಯೋಜನವಾಗಿಲ್ಲ. ಚೀನಾ ಸಂಪೂರ್ಣವಾಗಿ ತನ್ನ ಸೇನೆಯನ್ನು ಹಿಂತೆಗೆದುಕೊಂಡಿಲ್ಲ.

SCROLL FOR NEXT