ದೇಶ

ಕೇರಳ ವಿಧಾನಸಭೆ ಅಧಿವೇಶನ ಆರಂಭ:ಪಿಣರಾಯಿ ಸರ್ಕಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್ ಅನುಮತಿ

Sumana Upadhyaya

ತಿರುವನಂತಪುರ: ಕೋವಿಡ್-19 ಶಿಷ್ಟಾಚಾರಗಳ ನಡುವೆ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಕೇರಳ ವಿಧಾನಸಭೆಯ ಒಂದು ದಿನದ ಅಧಿವೇಶನ ಸೋಮವಾರ ಬೆಳಗ್ಗೆ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷ ಯುಡಿಎಫ್ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸ್ಪೀಕರ್ ಬೆಳಗ್ಗೆ ಅವಕಾಶ ನೀಡಿ ಈ ವಿಷಯದ ಮೇಲೆ ಚರ್ಚಿಸಲು 5 ಗಂಟೆಗಳ ಕಾಲ ಅವಕಾಶ ನೀಡಿದರು. ಸದ್ಯ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿದೆ.

ಬೆಳಗ್ಗೆ ಸದನದಲ್ಲಿ ಹೈಡ್ರಾಮಾ: ವಿಧಾನಸಭಾ ಸ್ಪೀಕರ್ ಶ್ರೀರಾಮಕೃಷ್ಣನ್ ಅವರನ್ನು ಸ್ಥಾನದಿಂದ ತೆಗೆದುಹಾಕಬೇಕೆಂದು ಐಯುಎಂಎಲ್ ನ ಸದಸ್ಯ ಎಂ ಉಮ್ಮರ್ ನೊಟೀಸ್ ನೀಡಿದ ನಂತರ ಸ್ಪೀಕರ್ ಸೀಟು ಬಿಟ್ಟುಹೋಗುವಂತೆ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲಾ ಒತ್ತಾಯಿಸಿದರು.

ಚಿನ್ನದ ಕಳ್ಳಸಾಗಣೆ ಕೇಸಿನಲ್ಲಿ ಆರೋಪಿಯಾಗಿರುವ ಸ್ವಪ್ನ ಸುರೇಶ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪೀಕರ್ ಅವರು ಭಾಗವಹಿಸಿ ಸದನದ ಮರ್ಯಾದೆಗೆ ಚ್ಯುತಿ ತಂದಿದ್ದಾರೆ ಎಂದು ಎಂ ಉಮ್ಮರ್ ಆರೋಪಿಸಿದರು. ತಮ್ಮ ವಿರುದ್ಧ ನಿರ್ಣಯ ಹೊರಡಿಸುವಂತೆ ವಿರೋಧ ಪಕ್ಷ ನೀಡಿದ ನೊಟೀಸನ್ನು ಸ್ಪೀಕರ್ ತಿರಸ್ಕರಿಸಿದರು.

14 ದಿನ ಮೊದಲು ನೊಟೀಸ್ ನೀಡದ ಹೊರತು ಸ್ಪೀಕರ್ ಅವರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷ ಶ್ರೀರಾಮಕೃಷ್ಣನ್ ಸಂವಿಧಾನ ವಿಧಿ 179ರ ಸಿ ಪರಿಚ್ಛೇದವನ್ನು ಉಲ್ಲೇಖಿಸಿ ಹೇಳಿದರು. 

SCROLL FOR NEXT