ಅಹ್ಮದಾಬಾದ್: ಗುಜರಾತ್ ಬಿಜೆಪಿಯಲ್ಲಿ ಬಂಡಾಯ ಹೊಗೆ ಹೊತ್ತಿಕೊಂಡಿದ್ದು, ಪಕ್ಷದ ಆದೇಶ ಉಲ್ಲಂಘಿಸಿದ ಕಾರಣಕ್ಕಾಗಿ ಬರೊಬ್ಬರಿ 38 ಕೌನ್ಸಿಲರ್ ಗಳನ್ನು ಅಮಾನತು ಮಾಡಲಾಗಿದೆ.
ಕಳೆದ ಆಗಸ್ಟ್ 24ರಂದು ನಡೆದ 6 ಪಾಲಿಕೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಆದೇಶ ಉಲ್ಲಂಘಿಸಿದ ಆರೋಪದ ಮೇರೆಗೆ 38 ಕೌನ್ಸಿಲರ್ ಗಳನ್ನು ಅಮಾನತು ಮಾಡಲಾಗಿದೆ. ಅಂದು ನಡೆದ ಮತದಾನದ ವೇಳೆ ಈ 38 ಕೌನ್ಸಿಲರ್ ಗಳು ಪಕ್ಷದ ಆದೇಶ ಉಲ್ಲಂಘಿಸಿ ಚುನಾವಣೆಗೆ ಗೈರಾಗಿದ್ದರು ಮತ್ತು ಪಕ್ಷದ ವಿರುದ್ಧ ಮತದಾನ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಸ್ತುತ ಅಮಾನತುಗೊಂಡಿರುವ ಕೌ ನ್ಸಿಲರ್ ಗಳ ಪೈಕಿ ರಾಜ್ ಕೋಟ್ ನ ಉಪ್ಲೇಟಾ ಮುನ್ಸಿಪಾಲಿಟಿಯ 14, ಕಚ್ ನ ರಾಪರ್ ಮುನ್ಸಿಪಾಲಿಟಿಯ 13 ಮತ್ತು ಪಟಾನ್, ಬನಸ್ಕಂತ, ಸಬರ್ಕಂತ ಮತ್ತು ಭಾವನಗರ ಜಿಲ್ಲೆಗಳ ಹರಿಜ್, ತರಾದ್, ಖೇಡ್‌ಬ್ರಹ್ಮ ಮತ್ತು ತಲಾಜಾ ಕೌನ್ಸಿಲರ್ ಗಳನ್ನು ಅಮಾನತು ಮಾಡಲಾಗಿದೆ.