ದೇಶ

ಪಶ್ಚಿಮ ಬಂಗಾಳ: ಪ್ರತಿಭಟನೆ ವೇಳೆ ಲಾಠಿ ಚಾರ್ಜ್, ಬಿಜೆಪಿ ಕಾರ್ಯಕರ್ತ ಸಾವು

Lingaraj Badiger

ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಲಾಠ್ ಚಾರ್ಜ್ ನಿಂದಾಗಿ ಕೇಸರಿ ಪಕ್ಷದ ಓರ್ವ ಕಾರ್ಯಕರ್ತ ಮೃತಪಟ್ಟಿದ್ದಾರೆ.

ರಾಜ್ಯ ಸರ್ಕಾರದ ದುರಾಡಳಿತ ವಿರೋಧಿ ಬಿಜೆಪಿ ಯುವ ಮೋರ್ಚಾ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, ಇಂದು ಸಿಲಿಗುರಿಯ ಮಿನಿ ಸಚಿವಾಲಯ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಘಟನೆ ಪುಲಿನ್ ರಾಯ್ ಎಂಬ ಕಾರ್ಯಕರ್ತ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪ್ರತಿಭಟನಾ ನಿರತ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ನಿರ್ದಯವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಪ್ರತಿಭಟನಾ ಮೆರವಣಿಗೆಯನ್ನು ನಮ್ಮ ಪಕ್ಷದ ಯುವ ಮೋರ್ಚಾ ಆಯೋಜಿಸಿತ್ತು. ಯುವ ಮೋರ್ಚಾದ ಕಾರ್ಮಿಕರು ಆಡಳಿತ ಕಟ್ಟಡದತ್ತ ಸಾಗುತ್ತಿದ್ದ ವೇಳೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಹೇಳಿದ್ದಾರೆ. 

ಪೊಲೀಸರು ಅನಗತ್ಯವಾಗಿ ನಮ್ಮ ಕಾರ್ಮಿಕರೊಬ್ಬರ ಸಾವಿಗೆ ಕಾರಣವಾಗಿದ್ದಾರೆ. ಲಾಠಿ ಚಾರ್ಜ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಯಕರ್ತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು ಎಂದು ಘೋಷ್ ತಿಳಿಸಿದ್ದಾರೆ.

ಸಾವಿರಾರು ಬಿಜೆಪಿ ಕಾರ್ಯಕರ್ತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತುಹಾಕಿ ಮಿನಿ ಸಚಿವಾಲಯದ ಕಟ್ಟಡದ ಕಡೆಗೆ ಹೋಗಲು ಯತ್ನಿಸಿದಾಗ ಈ ಘಟನೆ ನಡೆದಿದೆ.

SCROLL FOR NEXT