ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಇಂದು ಕರೆ ನೀಡಿದ್ದ ಭಾರತ್ ಬಂದ್ 25 ರಾಜ್ಯಗಳಲ್ಲಿ ಪರಿಣಾಮ ಬೀರಿದ್ದು, ಯಶಸ್ವಿಯಾಗಿರುವಂತೆಯೇ ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಬೇಡಿಕೆಗಳಿಗೆ ಯೆಸ್ ಅಥವಾ ನೋ' ಹೇಳಲು ಒತ್ತಾಯಿಸುತ್ತೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಬುಧವಾರ ರೈತರೊಂದಿಗೆ ಅಮಿತ್ ಶಾ ಆರನೇ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಇಂದು ಸಂಜೆ 7 ಗಂಟೆಗೆ ಅಮಿತ್ ಶಾ ರೈತರನ್ನು ಭೇಟಿಯಾಗುತ್ತಿದ್ದಾರೆ.
ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ರುದ್ರು ಸಿಂಗ್ ಮಾನ್ಸಾ, ಪ್ರತಿಭಟನೆಯನ್ನು ಅರ್ಧಕ್ಕೆ ಕೈ ಬಿಡುವ ಪ್ರಶ್ನೆಯೇ ಇಲ್ಲ, ಅಮಿತ್ ಶಾ ನಮ್ಮನ್ನು ಭೇಟಿಯಾದಾಗ 'ಯೆಸ್ ಅಥವಾ ನೋ' ಹೇಳಲು ಒತ್ತಾಯಿಸುತ್ತೇವೆ. ಭಾರತ್ ಬಂದ್ ಮುಂದೆ ಕೇಂದ್ರ ಸರ್ಕಾರ ತಲೆ ತಗ್ಗಿಸಿದೆ ಎಂದು ಎಂದು ಹೇಳಿದ್ದಾರೆ.
ಭಾರತ್ ಬಂದ್ ಯಶಸ್ವಿಯಾಗಿರುವುದಾಗಿ ಮತ್ತೋರ್ವ ರೈತ ಹೇಳಿದ್ದಾರೆ. 25 ರಾಜ್ಯಗಳ 10 ಸಾವಿರ ಕಡೆಗಳಲ್ಲಿ ಪ್ರತಿಭಟನೆಗೆ ಉತ್ತಮ ಸ್ಪಂದನೆ ದೊರಕಿರುವುದಾಗಿ ಮತ್ತೋರ್ವ ರೈತ ತಿಳಿಸಿದರು.
ದೆಹಲಿ ಮತ್ತು ಹರಿಯಾಣ ಜನರಿಗೆ ತೊಂದರೆ ಕೊಡಲು ಇಷ್ಟಪಡಲ್ಲ, ಬುರಾರಿ ಮೈದಾನ ತೆರೆದ ಜೈಲಿನಂತಾಗಿದ್ದು, ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಸರ್ಕಾರವನ್ನು ಕೋರಿರುವುದಾಗಿ ಅವರು ಹೇಳಿದರು.