ದೇಶ

ಸರ್ಕಾರ ನೀಡಿದ ಕರಡು ಪ್ರಸ್ತಾವನೆ ಬಗ್ಗೆ ಚರ್ಚಿಸಿದ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧಾರ: ರೈತರು

Lingaraj Badiger

ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ಕಳುಹಿಸಿರುವ ಕರಡು ಪ್ರಸ್ತಾವನೆ ಕುರಿತು ಚರ್ಚಿಸಲು ರೈತ ಸಂಘಟನೆಗಳು ಸಭೆ ನಡೆಸಲಿದ್ದು, ಸಭೆಯ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ಅವರು ಹೇಳಿದ್ದಾರೆ.

ಇಂದು ಸಂಜೆಯ ವೇಳೆಗೆ ಈ ವಿಷಯಗಳ ಬಗ್ಗೆ ಸ್ವಲ್ಪ ಸ್ಪಷ್ಟತೆ ನೀಡುವ ಮೂಲಕ ಗೊಂದಲಗಳನ್ನು ನಿವಾರಿಸುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

"ಕೇಂದ್ರ ಕಳುಹಿಸಿದ ಕರಡು ಕುರಿತು ನಾವು ಸಭೆ ನಡೆಸುತ್ತೇವೆ. ಇಂದು ಸರ್ಕಾರದೊಂದಿಗೆ ನಿಗದಿಯಾಗಿದ್ದ ಆರನೇ ಸುತ್ತಿನ ಮಾತುಕತೆ ರದ್ದಾಗಿದೆ. ಕೇಂದ್ರ ಸರ್ಕಾರ ಪ್ರಸ್ತಾವನೆಯ ಕರಡು ಕಳುಹಿಸಿದೆ ಮತ್ತು ನಾವು ಅದನ್ನು ನೋಡಬೇಕೆಂದು ಬಯಸಿದೆ ಎಂದು ಟಿಕೈಟ್ ತಿಳಿಸಿದ್ದಾರೆ.

ಕರಡು ಪ್ರತಿ ನೋಡಿದ ನಂತರ ಮತ್ತು ಆ ಬಗ್ಗೆ ನಾವು ಚರ್ಚಿಸಿದ ನಂತರ ನಮ್ಮ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ. ಇಂದು ಸಂಜೆ 4.00 ರಿಂದ ಸಂಜೆ 5.00 ರ ವೇಳೆಗೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಟಿಕೈಟ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಮಾರು 40 ರೈತ ಸಂಘಟನೆಗಳೊಂದಿಗೆ ಬುಧವಾರ ನಡೆಸಬೇಕಿದ್ದ 6ನೇ ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ನಿನ್ನೆ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ ನಂತರ ರೈತ ಮುಖಂಡರು ಮಾತುಕತೆಯಲ್ಲಿ ಭಾಗಿಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಇಂದು ಕೇಂದ್ರ ಸರ್ಕಾರ ಮಾತುಕತೆ ರದ್ದುಪಡಿಸಿದೆ.

ನಿನ್ನೆಯ ಮಾತುಕತೆಯಲ್ಲಿ ನಿರ್ಧರಿಸಿದಂತೆ ಕೇಂದ್ರ ಸರ್ಕಾರ ವಿಧೇಯಕಕ್ಕೆ ತಿದ್ದುಪಡಿ ಮಾಡಿದ ಕರಡು ಪ್ರಸ್ತಾವನೆಯನ್ನು ಇಂದು ರೈತ ಮುಖಂಡರಿಗೆ ಕಳುಹಿಸಿದೆ.

SCROLL FOR NEXT