ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪಶ್ಚಿಮ ಬಂಗಾಳ ಭೇಟಿಯ ವೇಳೆ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರಿಗೆ ಸಮನ್ಸ್ ನೀಡಿದ ಕೇಂದ್ರ ಗೃಹ ಸಚಿವಾಲಯವನ್ನು ಟಿಎಂಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ನಡ್ಡಾ ಅವರ ಬೆಂಗಾವಲು ಪಡೆ "ಅಪರಾಧಿಗಳು ಮತ್ತು ಗೂಂಡಾಗಳನ್ನು" ಒಳಗೊಂಡಿತ್ತು. ಅವರು ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ಟಿಎಂಸಿ ಹಿರಿಯ ಸಂಸದರಾದ ಸೌಗತ ರಾಯ್ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಿರುವುದು(ವರದಿ ಕೋರಿ) ಅಸಂವಿಧಾನಿಕ. ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಮನ್ಸ್ ನೀಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಕಲ್ಯಾಣ್ ಬ್ಯಾನರ್ಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಪ್ರಚೋದನಕಾರಿ ಭಾಷಣಗಳು "ಕೆಟ್ಟ" ಪರಿಸ್ಥಿತಿಗೆ ಕಾರಣವಾಗುತ್ತಿವೆ. ನಡ್ಡಾ ಅವರೊಂದಿಗೆ "ಶಿಕ್ಷೆಗೊಳಗಾದ ಅಪರಾಧಿಗಳು ಮತ್ತು ಬಿಜೆಪಿಗೆ ಸೇರಿದ ಶಸ್ತ್ರಸಜ್ಜಿತ ವ್ಯಕ್ತಿಗಳು" ಇದ್ದಾರೆ ಎಂದು ಆರೋಪಿಸಿದರು.
ಜೆಪಿ ನಡ್ಡಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್‌ಗೆ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ಸಿಬ್ಬಂದಿ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ತೃಣಮೂಲ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ನಡ್ಡಾ ಅವರು ಪಾರಾಗಿದ್ದರೂ, ಅವರೊಂದಿಗಿದ್ದ ಇತರ ನಾಯಕರಾದ ಕೈಲಾಶ್ ವಿಜಯವರ್ಗಿಯಾ ಮತ್ತು ಮುಕುಲ್ ರಾಯ್ ಗಾಯಗೊಂಡಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಮನ್ಸ್ ನೀಡಿದೆ.