ದೇಶ

ಕೇಂದ್ರದ ಸಮನ್ಸ್ ದಿಕ್ಕರಿಸಿದ ದೀದಿ, ದೆಹಲಿಗೆ ಮುಖ್ಯ ಕಾರ್ಯದರ್ಶಿ, ಡಿಜಿಪಿ ಕಳುಹಿಸದಿರಲು ಮಮತಾ ಸರ್ಕಾರ ನಿರ್ಧಾರ

Lingaraj Badiger

ಕೋಲ್ಕತಾ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪಶ್ಚಿಮ ಬಂಗಾಳ ಭೇಟಿಯ ವೇಳೆ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರಿಗೆ ಕೇಂದ್ರ ಗೃಹ ಸಚಿವಾಲಯ ನೀಡಿದ ಸಮನ್ಸ್ ಅನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಿಕ್ಕರಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಗೆ ಪತ್ರ ಬರೆದಿದ್ದು, ಡಿಸೆಂಬರ್ 14 ರಂದು ಸಭೆ ಕರೆದು, ಸಭೆಯಲ್ಲಿ "ರಾಜ್ಯ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು" ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಡಿಸೆಂಬರ್ 14 ರಂದು ದೆಹಲಿಗೆ ಬರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

"ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು 2020ರ ಡಿಸೆಂಬರ್ 14 ರಂದು ಮಧ್ಯಾಹ್ನ 12.15 ಕ್ಕೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಕೆಲವು ಝೆಡ್ ಕೆಟೆಗರಿ ಭದ್ರತೆ ಸೇರಿದಂತೆ ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು" ಸೂಚಿಸಲಾಗಿದೆ ಎಂದು ಬಂಡೋಪಾಧ್ಯಾಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಜೆಪಿ ನಡ್ಡಾ ಭದ್ರತೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಕೈಗೊಂಡ ವಿವಿಧ ಕ್ರಮಗಳನ್ನು ಪಟ್ಟಿ ಮಾಡಿರುವ ಬಂಡೋಪಾಧ್ಯಾಯ ಅವರು, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಅತ್ಯಂತ ಗಂಭೀರತೆಯಿಂದ ಪರಿಹರಿಸುತ್ತಿದೆ ಎಂದು ಹೇಳಿದ್ದಾರೆ.

ಜೆಪಿ ನಡ್ಡಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್‌ಗೆ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ಸಿಬ್ಬಂದಿ ಮೇಲೆ ಕಲ್ಲು ಮತ್ತು ದೊಣ್ಣೆಗಳಿಂದ ತೃಣಮೂಲ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ನಡ್ಡಾ ಅವರು ಪಾರಾಗಿದ್ದರೂ, ಅವರೊಂದಿಗಿದ್ದ ಇತರ ನಾಯಕರಾದ ಕೈಲಾಶ್ ವಿಜಯವರ್ಗಿಯಾ ಮತ್ತು ಮುಕುಲ್ ರಾಯ್ ಗಾಯಗೊಂಡಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಮನ್ಸ್ ನೀಡಿದ್ದು, ಡಿಸೆಂಬರ್ 14 ರಂದು ದೆಹಲಿಗೆ ಬರುವಂತೆ ಸೂಚಿಸಲಾಗಿದೆ.

SCROLL FOR NEXT