ದೇಶ

ನಿರ್ಭಯಾ ಸಾವಿಗೆ 8 ವರ್ಷ: ಅತ್ಯಾಚಾರ ಸಂತ್ರಸ್ಥರ ಪರ ನನ್ನ ಹೋರಾಟ ನಿಲ್ಲುವುದಿಲ್ಲ ಎಂದ ಆಶಾದೇವಿ

Srinivasamurthy VN

ನವದೆಹಲಿ: ನನ್ನ ಮಗಳು ಸಾವಿಗೀಡಾಗಿ ವರ್ಷ ಕಳೆದಿದ್ದು, ಅತ್ಯಾಚಾರ ಸಂತ್ರಸ್ಥರ ಪರ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ನಿರ್ಭಯಾ ತಾಯಿ ಆಶಾದೇವಿ ಹೇಳಿದ್ದಾರೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ 8 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಎಎನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಆಶಾದೇವಿ ಅವರು, ನನ್ನ ಮಗಳಿಗೆ ನ್ಯಾಯ ಸಿಗಲು ವರ್ಷಗಳೇ ಬೇಕಾಯಿತು ಎಂದು ಕಾನೂನು ವ್ಯವಸ್ಥೆಯ ವಿರುದ್ಧ ತಮ್ಮ  ಆಕ್ರೋಶವನ್ನು ವ್ಯಕ್ತಪಡಿಸಿದರು. ಅಲ್ಲದೆ ನ್ಯಾಯ ಸಿಗಲು ಎಂಟು ವರ್ಷ ಕಾಯಬೇಕಾಯಿತು ಎಂದು ಅಳಲು ತೋಡಿಕೊಂಡರು.

ನ್ಯಾಯ ಸಿಗಲು ಯಾಕೆ ಇಷ್ಟು ಸಮಯ ಬೇಕಾಯಿತು ಎಂಬುದರ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ ತುರ್ತಾಗಿ ನ್ಯಾಯ ದೊರಕಿಸಿಕೊಡಲು ಕಾನೂನುಗಳನ್ನು ಪುನರ್ ವಿಮರ್ಶೆ ಮಾಡಬೇಕು. ನನ್ನ ಮಗಳಿಗೆ ನ್ಯಾಯ ದೊರಕಿದೆ. ಅದರರ್ಥ  ನಾನು ಮೌನವಾಗಿ ಕುಳಿತುಕೊಳ್ಳುತ್ತೇನೆ ಎಂದಲ್ಲ. ಎಲ್ಲ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ನಾನು ಹೋರಾಟ ಮುಂದುವರಿಸುತ್ತೇನೆ. ಅತ್ಯಾಚಾರದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ದೇಶದಲ್ಲಿ ಇಂತಹ ಸ್ಥಿತಿ ಮರುಕಳಿಸಬಾರದು ಎಂದು ಅವರು ಮನವಿ ಮಾಡಿದರು. 

2012ರ ಡಿಸೆಂಬರ್ 16ರ ರಾತ್ರಿ ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಲಾಗಿತ್ತು. ಚಲಿಸುತ್ತಿದ್ದ ಬಸ್ ನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯನ್ನು ಕ್ರೂರವಾಗಿ ಹಿಂಸಿಸಲಾಗಿತ್ತು. ಆಕೆಯ ಮರ್ಮಾಂಗಕ್ಕೆ ರಾಡ್ ಗಳನ್ನು ತುರುಕಿ,  ಗಾಜಿನ ಬಿಯರ್ ಬಾಟಲಿಗಳನ್ನು ಹಾಕಲಾಗಿತ್ತು. ಬಳಿಕ ಸಂತ್ರಸ್ಥೆ ನಿರ್ಭಯಾ ಆಸ್ಪತ್ರೆಯಲ್ಲಿ ಅಸು ನೀಗಿದ್ದರು. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆಯ ಬಳಿಕ ತಪ್ಪಿತಸ್ಥರನ್ನು ಗಲ್ಲಿಗೇರಿಸಲಾಗಿತ್ತು.

SCROLL FOR NEXT