ದೇಶ

ರೈತರ ಪ್ರತಿಭಟನೆ ಬಗ್ಗೆ ಜೈಶಂಕರ್ ಜತೆ ಚರ್ಚಿಸಿದ್ದೇನೆ: ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್

Lingaraj Badiger

ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಭಾರತ ಪ್ರವಾಸದಲ್ಲಿರುವ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರು ಬುಧವಾರ ಹೇಳಿದ್ದಾರೆ. ಆದರೆ ಭಾರತದ ಉದ್ದೇಶಿತ ಕೃಷಿ ಸುಧಾರಣೆಗಳು ಆಂತರಿಕ ವಿಚಾರವಾಗಿದ್ದು, ಅದನ್ನು ಬ್ರಿಟನ್ ಗೌರವಿಸುತ್ತದೆ ಎಂದು ತಿಳಿಸಿದ್ದಾರೆ.

ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಬ್ರಿಟನ್ ನಿಲುವು ಏನು ಎಂಬ ವರದಿಗಾರರ ಪ್ರಶ್ನಿಗೆ ಉತ್ತರಿಸಿದ ರಾಬ್, ಈ ಬಗ್ಗೆ ನಾನು ಜೈಶಂಕರ್ ಅವರೊಂದಿಗೆ ಚರ್ಚಿಸಿದ್ದೇನೆ. ನಿಸ್ಸಂಶಯವಾಗಿಯೂ, ನಿಮ್ಮ ವ್ಯವಸ್ಥೆಯ ಮೂಲಕ ನಡೆಯುತ್ತಿರುವ ದೇಶಿಯ ಸುಧಾರಣೆಗಳನ್ನು ನಾವು ಗೌರವಿಸುತ್ತೇವೆ ಎಂದಿದ್ದಾರೆ.

ಭಾರತವು ಮಾರುಕಟ್ಟೆ-ಚಾಲಿತ ಆರ್ಥಿಕತೆಯನ್ನು ಹೊಂದಿದ್ದು, ಶಾಂತಿಯುತ ಪ್ರತಿಭಟನೆಗಳು ಮತ್ತು ಹುರುಪಿನ ಮಾತುಕತೆಯ ಪರಂಪರೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಮತ್ತು ನಾವು ಅದನ್ನು ಆಸಕ್ತಿಯಿಂದ ನೋಡುತ್ತೇವೆ ಹಾಗೂ ಗೌರವಿಸುತ್ತೇವೆ ಎಂದ ರಾಬ್ ಹೇಳಿದ್ದಾರೆ.

ರಾಬ್ ಅವರು ಜೈಶಂಕರ್ ಜತೆ ವ್ಯಾಪಾರ, ರಕ್ಷಣಾ, ಶಿಕ್ಷಣ, ಪರಿಸರ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಡೊಮಿನಿಕ್ ರಾಬ್ ಅವರು ಪರಿಸರ ಹಾಗೂ ಶಿಕ್ಷಣ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಇದೇ 17ರಂದು ಅವರು ಬೆಂಗಳೂರಿಗೂ ಪ್ರಯಾಣಿಸಲಿದ್ದು, ಈ ವೇಳೆ  ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲದೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಕೂಡ ಮುಂದಿನ ವರ್ಷ ಭಾರತಕ್ಕೆ ಆಗಮಿಸುವ ಸಾಧ್ಯತೆಗಳಿವೆ.

SCROLL FOR NEXT