ದೇಶ

ಭಾರತ-ಬಾಂಗ್ಲಾ ವರ್ಚುವಲ್ ಶೃಂಗಸಭೆ; 1965ರಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಪರ್ಕ ಪುನಾರಂಭ ಸೇರಿ 7 ಒಪ್ಪಂದಗಳಿಗೆ ಸಹಿ

Srinivasamurthy VN

ನವದೆಹಲಿ: ಭಾರತ-ಬಾಂಗ್ಲಾದೇಶ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು, 1965ರಲ್ಲಿ ಸ್ಥಗಿತಗೊಂಡಿದ್ದ ಚಿಲಿಹತಿ–ಹಲ್ದಿಬಾರಿ ರೈಲು ಸಂಪರ್ಕ ಪುನಶ್ಚೇತನ ಸೇರಿದಂತೆ ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಹೌದು.. ಬಾಂಗ್ಲಾ ವಿಮೋಚನೆಯ 49ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಬೆನ್ನಲ್ಲೇ ಭಾರತ ಮತ್ತು ಬಾಂಗ್ಲಾದೇಶ ವರ್ಚುವಲ್ ಶೃಂಗಸಭೆ ನಡೆದಿದ್ದು, ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪಾಲ್ಗೊಂಡಿದ್ದರು. ಈ ಮಹತ್ವದ ಸಭೆಯಲ್ಲಿ ಉಭಯ ದೇಶಗಳು 1965ರಲ್ಲಿ ಸ್ಥಗಿತಗೊಂಡಿದ್ದ ಚಿಲಿಹತಿ–ಹಲ್ದಿಬಾರಿ ರೈಲು ಸಂಪರ್ಕದ ಪುನಾರಂಭ ಅಥವಾ ಪುನಶ್ಚೇತನ ಸೇರಿದಂತೆ ಏಳು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಚಿಲಿಹತಿ–ಹಲ್ದಿಬಾರಿ ರೈಲು ಸಂಪರ್ಕದಲ್ಲಿ ಆರಂಭಿಕ ಹಂತದಲ್ಲಿ ಸರಕು ಸಾಗಣೆ ರೈಲುಗಳು ಸಂಚಾರ ನಡೆಸಲಿದ್ದು, ಪೂರ್ಣ ಪ್ರಮಾಣದಲ್ಲಿ ರೈಲು ಹಳಿ ಕಾಮಗಾರಿ ಮುಕ್ತಾಯಗೊಂಡ ಬಳಿಕ ಪ್ಯಾಸೆಂಜರ್ ರೈಲು ಆರಂಭಿಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.

ಚಿಲಹತಿ-ಹಲ್ಡಿಬಾರಿ ರೈಲು ಸಂಪರ್ಕದ ಉದ್ಘಾಟನೆಯಿಂದಾಗಿ ಬಾಂಗ್ಲಾದೇಶದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದು 1965 ರವರೆಗೆ ಕೋಲ್ಕತ್ತಾದಿಂದ ಸಿಲಿಗುರಿಗೆ ಹೋಗುವ ಬ್ರಾಡ್ ಗೇಜ್ ಮುಖ್ಯ ಮಾರ್ಗದ ಭಾಗವಾಗಿತ್ತು.

ಇನ್ನು ಶೃಂಗಸಭೆಯಲ್ಲಿ ಭಾರತ ಮತ್ತು ಬಾಂಗ್ಲೇದಶ ರೈಲು ಸಂಪರ್ಕ ಪುನಶ್ಚೇತನ ಒಪ್ಪಂದಕ್ಕೆ ಸಹಿಹಾಕುವ ಜತೆಗೆ, ಹೈಡ್ರೋಕಾರ್ಬನ್‌, ಕೃಷಿ ಮತ್ತು ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಉಭಯ ದೇಶಗಳ ನಾಯಕರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಬಾಂಗ್ಲಾದೇಶದಲ್ಲಿ ಗುರುವಾರ ಆರಂಭವಾದ ಶೃಂಗಸಭೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, 'ನೆರೆಹೊರೆಯ ಮಿತ್ರರಾಷ್ಟ್ರಗಳಲ್ಲಿ ಭಾರತ, ಬಾಂಗ್ಲಾದೇಶಕ್ಕೆ ಪ್ರಮುಖ ಸ್ಥಾನ ನೀಡಿದೆ. ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ' ಎಂದು ಅವರು 'ಬಾಂಗ್ಲಾ ವಿಮೋಚನಾ ದಿನದ ಅಂಗವಾಗಿ, ನಿಮ್ಮೊಂದಿಗೆ ನಾವು ಭಾರತದಲ್ಲಿ 'ವಿಜಯ್‌ ದಿವಸ್‌' ಆಚರಿಸುತ್ತಿದ್ದೇವೆ' ಎಂದು ಹೇಳಿದರು. 

ಇದೇ ವೇಳೆ ಬಾಂಗ್ಲಾ ಪ್ರಧಾನಿ ಹಸೀನಾ ಮಾತನಾಡಿ, 'ಭಾರತ ನಮ್ಮ ನಿಜವಾದ ಸ್ನೇಹಿತ' ಎಂದು ಬಣ್ಣಿಸಿದರು. ನಂತರ ಮೋದಿ ಮತ್ತು ಹಸೀನಾ ಅವರು ಬಾಂಗ್ಲಾ ದೇಶದ ಸಂಸ್ಥಾಪಕ ಮುಜಿಬುರ್ ರಹಮಾನ್ ಮತ್ತು ಭಾರತದ ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿಯವರ ಜೀವನ ಮತ್ತು ಪರಂಪರೆ ಸಾರುವ ಡಿಜಿಟಲ್‌ ಪ್ರದರ್ಶನವನ್ನು ಉದ್ಘಾಟಿಸಿದರು.
 

SCROLL FOR NEXT