ದೇಶ

ರೈತ ದಿನಾಚರಣೆಗೆ ಜನ ನಾಯಕರ ಶುಭಾಶಯ: ರೈತರು ಸಂಧಾನಕ್ಕೆ ಮಣಿಯುವ ಭರವಸೆಯಲ್ಲಿ ಸರ್ಕಾರ, ಪ್ರತಿಭಟನೆ 26ನೇ ದಿನಕ್ಕೆ

Sumana Upadhyaya

ನವದೆಹಲಿ: ರಾಷ್ಟ್ರೀಯ ರೈತ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ರೈತಾಪಿ ವರ್ಗವನ್ನು ಸ್ಮರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ಬಗ್ಗೆ ಮಾತನಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜಯಂತಿ ಸಂದರ್ಭದಲ್ಲಿ ಪ್ರಣಾಮಗಳು. ಅವರ ಜೀವನವನ್ನು ಗ್ರಾಮೀಣ ಭಾರತದ ಮತ್ತು ರೈತರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದರು. ಅವರನ್ನು ಸ್ಮರಿಸುವ ಸುದೈವ ಅವಕಾಶ ಸಿಕ್ಕಿರುವುದು ಪುಣ್ಯ ಎಂದಿದ್ದಾರೆ.

ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈತರ ದಿನದ ಶುಭಾಶಯಗಳು, ರೈತರು ಈ ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸಿದ್ದಾರೆ. ಕೆಲವು ರೈತರು ನೂತನ ಕೃಷಿ ಮಸೂದೆ ವಿರುದ್ಧ ಹೋರಾಡುತ್ತಿದ್ದಾರೆ. ಸರ್ಕಾರ ಅವರ ಜೊತೆ ಸೂಕ್ಷ್ಮವಾಗಿ ವಿನಯದಿಂದ ಸಂವೇದನಾಶೀಲವಾಗಿ ಮಾತುಕತೆ ನಡೆಸುತ್ತಿದೆ. ರೈತರು ಪರಿಸ್ಥಿತಿ, ನೂತನ ಕೃಷಿ ಮಸೂದೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಪ್ರತಿಭಟನೆ ಹಿಂಪಡೆಯುತ್ತಾರೆ ಎಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ದೇಶದ ಕೃಷಿಕರ ಸಮಸ್ಯೆಗಳಿಗೆ ದನಿಯಾದ ಮಾಜಿ ಪ್ರಧಾನಮಂತ್ರಿ ದಿ. ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ಎಲ್ಲ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನದ ಶುಭಕಾಮನೆಗಳು. ಕೃಷಿ ಪ್ರಧಾನವಾದ ನಮ್ಮ ದೇಶದ ಹಿತ ಅನ್ನದಾತನ ಹಿತದಲ್ಲೇ ಅಡಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಈ ರೈತರ ದಿನ ರೈತರು ಮತ್ತು ರೈತ ವಿರೋಧಿಗಳ ಮಧ್ಯೆ ಹೋರಾಟವನ್ನು ಸಾರುತ್ತದೆ. ನಮ್ಮ ಅನ್ನದಾತರು ಹೋರಾಟ ಮಾಡುತ್ತಾ, ಜೀವವನ್ನು ತ್ಯಾಗ ಮಾಡಿದರೂ ಕೂಡ ಸರ್ಕಾರದ ಪ್ರತಿನಿಧಿಗಳ ಕಣ್ಣು ಕುರುಡಾದಂತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರೈತರು ನಿಜವಾದ ವೀರರು, ಅವರ ಸಮರ್ಪಣೆ, ಶ್ರಮದಿಂದ ನಾವೆಲ್ಲಾ ಸುಖದಿಂದ ಆಹಾರ ತಿನ್ನುತ್ತಿದ್ದೇವೆ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. 

ಇನ್ನೊಂದೆಡೆ ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರಿದಿದೆ. ದೆಹಲಿ ಉತ್ತರ ಪ್ರದೇಶ ಗಡಿಭಾಗ ಘಾಜಿಪುರ್ ದಲ್ಲಿ ರೈತ ದಿನಾಚರಣೆ ಅಂಗವಾಗಿ ರೈತರು ಹವನ ನಡೆಸಿದರು. ರೈತರ ಪ್ರತಿಭಟನೆ ಇಂದು 26ನೇ ದಿನಕ್ಕೆ ಕಾಲಿಟ್ಟಿದೆ.

SCROLL FOR NEXT