ಕೋವಿಡ್-19: ದೇಶದಲ್ಲಿಂದು 23,950 ಹೊಸ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 1.99 ಕೋಟಿ
ಬ್ರಿಟನ್ ಸೇರಿದಂತೆ ಹತ್ತು ಹಲವು ರಾಷ್ಟ್ರಗಳಲ್ಲಿ ಹೈಸ್ಪೀಡ್ ಕೊರೋನಾ ಪತ್ತೆಯಾಗಿ ಆತಂಕ ಹೆಚ್ಚಾಗಿರುವಾಗಲೇ ಭಾರತದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆಯ ಹಾವು-ಏಣಿ ಆಟ ಮುಂದುವರೆದಿದೆ.
ನವದೆಹಲಿ: ಬ್ರಿಟನ್ ಸೇರಿದಂತೆ ಹತ್ತು ಹಲವು ರಾಷ್ಟ್ರಗಳಲ್ಲಿ ಹೈಸ್ಪೀಡ್ ಕೊರೋನಾ ಪತ್ತೆಯಾಗಿ ಆತಂಕ ಹೆಚ್ಚಾಗಿರುವಾಗಲೇ ಭಾರತದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆಯ ಹಾವು-ಏಣಿ ಆಟ ಮುಂದುವರೆದಿದೆ.
ನಿನ್ನೆಯಷ್ಟೇ 20 ಸಾವಿರಕ್ಕಿಂತಲೂ ಕಡಿಮೆ ಪತ್ತೆಯಾಗಿದ್ದ ಸೋಂಕಿತರ ಸಂಖ್ಯೆ ಇಂದು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದಲ್ಲಿಂದು 23,950 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,00,99,066ಕ್ಕೆ ಏರಿಕೆಯಾಗಿದೆ.
ಇನ್ನು ನಿನ್ನೆ ಒಂದೇ ದಿನ 333 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 1,46,444ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ 1,00,99,066 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 26,895 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದರೊಂದಿಗೆ ಈ ವರೆಗೂ ಒಟ್ಟಾರೆ 96,63,382 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ.
ದೇಶದಲ್ಲಿ ಸೋಂಕಿತರಿಗಿಂತಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,89,240ಕ್ಕೆ ಇಳಿಕೆಯಾಗಿದೆ.
ಈ ನಡುವೆ ನಿನ್ನೆ ಒಂದೇ ದಿನ ದೇಶಾದ್ಯಂತ 10,98,164 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಭಾರತದಲ್ಲಿ ಒಟ್ಟಾರೆ 16,42,68,721 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.