ದೇಶ

'ಭಾರತದ ಸ್ವಾತಂತ್ರ್ಯ ಸಂಗ್ರಾಮ ಭಕ್ತಿ ಚಳವಳಿಯ ಬೇರುಗಳನ್ನು ಹೊಂದಿದೆ': ವಿಶ್ವ ಭಾರತಿ ಶತಮಾನೋತ್ಸವದಲ್ಲಿ ಪ್ರಧಾನಿ ಮೋದಿ 

Sumana Upadhyaya

ನವದೆಹಲಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬೇರು ಭಕ್ತಿ ಚಳವಳಿಯಲ್ಲಿದೆ. ನೂರಾರು ವರ್ಷಗಳ ಭಕ್ತಿ ಚಳವಳಿಯ ಜೊತೆಗೆ ಕರ್ಮ ಚಳವಳಿ ಕೂಡ ಈ ದೇಶದಲ್ಲಿ ನಡೆಯಿತು. ಭಾರತೀಯರು ಹಲವಾರು ವರ್ಷಗಳವರೆಗೆ ಗುಲಾಮಗಿರಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ, ವಿಶ್ವ ಭಾರತಿ ವಿಶ್ವ ವಿದ್ಯಾಲಯ ಗುರು ರವೀಂದ್ರ ನಾಥ ಠಾಗೋರ್ ರ ತತ್ವಶಾಸ್ತ್ರ, ದೂರದೃಷ್ಟಿ ಮತ್ತು ಕಠಿಣ ಪರಿಶ್ರಮದ ಸಮ್ಮಿಶ್ರವಾಗಿದೆ. ದೇಶಕ್ಕೆ ನಿರಂತರ ಶಕ್ತಿ ತುಂಬುವ ಕೇಂದ್ರವಾಗಿದೆ ಎಂದು ಶ್ಲಾಘಿಸಿದರು.

ಈ ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದಿನ ಪರಿಸ್ಥಿತಿಯನ್ನು ನಾವು ನೆನಪು ಮಾಡಿಕೊಂಡರೆ, ಕೇವಲ ಬ್ರಿಟಿಷ್ ಆಡಳಿತ ಮಾತ್ರವಲ್ಲದೆ ನಮ್ಮ ದೇಶದ ಸಂಪದ್ಭರಿತ ಅಭಿಪ್ರಾಯ, ನೂರಾರು ವರ್ಷಗಳ ಇತಿಹಾಸ ಇದರ ಸ್ಥಾಪನೆಗೆ ನೆರವಾಯಿತು. ಗುರುದೇವ ರವೀಂದ್ರ ನಾಥ ಠಾಕೋರರ ಮಾರ್ಗದರ್ಶನದಲ್ಲಿ ವಿಶ್ವ ಭಾರತಿ ವಿ.ವಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಭಾರತೀಯರ ಮನೋಧರ್ಮವನ್ನು ಬಲವಾಗಿ ಅಚ್ಚಳಿಯದಂತೆ ಮುದ್ರೆಯೊತ್ತಿದೆ. ಭಾರತದ ಧಾರ್ಮಿಕ ಪ್ರಜ್ಞಾವಂತಿಕೆ ಇಡೀ ಮನುಕುಲಕ್ಕೆ ಅದರ ಪ್ರಯೋಜನ ಸಿಗುವಂತಾಗಲು ಗುರುದೇವ ಬಯಸಿದ್ದರು. ಆತ್ಮನಿರ್ಭರ ಭಾರತ ದೃಷ್ಟಿಕೋನ ಸಹ ಈ ಮನೋಧರ್ಮದಿಂದ ಎಳೆ ತೆಗೆದುಕೊಳ್ಳಲಾಗಿದೆ ಎಂದರು.

ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಈಡೇರಿಸಲು ಸರಿಯಾದ ಮಾರ್ಗದಲ್ಲಿ ನಡೆಯುವ ಬಹುದೊಡ್ಡ ಏಕೈಕ ದೇಶ ಭಾರತವಾಗಿದೆ ಎಂದು ಸಹ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

1921ರಲ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಗುರುದೇವ ರವೀಂದ್ರನಾಥ ಠಾಗೋರ್ ರು ಸ್ಥಾಪಿಸಿದ ವಿಶ್ವ ಭಾರತಿ ವಿಶ್ವ ವಿದ್ಯಾಲಯ ದೇಶದ ಹಳೆ ವಿಶ್ವವಿದ್ಯಾಲಯಗಳಲ್ಲಿ ಒಂದು. 1951ರ ಮೇ ತಿಂಗಳಲ್ಲಿ ವಿಶ್ವ ಭಾರತಿ ವಿಶ್ವ ವಿದ್ಯಾಲಯವನ್ನು ಕೇಂದ್ರೀಯ ವಿ.ವಿ ಎಂದು ಮತ್ತು ರಾಷ್ಟ್ರದ ಮುಖ್ಯ ಸಂಸ್ಥೆಯೆಂದು ಘೋಷಿಸಲಾಯಿತು.

SCROLL FOR NEXT