ದೇಶ

ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ಟಿಎಂಸಿ ಪತ್ರ

Lingaraj Badiger

ಕೋಲ್ಕತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರು ರಾಜ್ಯದ ಆಡಳಿತ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ನಿರಂತರವಾಗಿ ಹೇಳಿಕೆಗಳನ್ನು ನೀಡುವ ಮೂಲಕ "ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸಿದ್ದಾರೆ" ಎಂದು ಆರೋಪಿಸಿರುವ ಆಡಳಿತರೂಢ ಟಿಎಂಸಿ, ರಾಜ್ಯಪಾಲರ ಹುದ್ದೆಯಿಂದ ಜಗದೀಪ್ ಧಂಕರ್ ಅವರನ್ನು ವಜಾಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದೆ.

ಈ ಮಧ್ಯೆ, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಟಿಎಂಸಿ ಭಯಭೀತವಾಗಿದೆ ಎಂದು ಬಿಜೆಪಿ ಹೇಳಿದೆ.

ಈ ಸಂಬಂಧ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಟಿಎಂಸಿ ಸಂಸದರ ತಂಡ, ಇತ್ತೀಚಿನ ದಿನಗಳಲ್ಲಿ ಧಂಕರ್ ಅವರ "ಸಾಂವಿಧಾನಿಕ ಚೌಕಟ್ಟು ಉಲ್ಲಂಘನೆ" ಪ್ರಕರಣಗಳ ಪಟ್ಟಿಯನ್ನು ಕೋವಿಂದ್ ಅವರಿಗೆ ಕಳುಹಿಸಿದೆ ಮತ್ತು ಸಂವಿಧಾನದ ಕಲಂ 156 ಅಡಿ ರಾಜ್ಯಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿರುವುದಾಗಿ ಟಿಎಂಸಿ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

"ರಾಜ್ಯಪಾಲರು ಕಳೆದ ವರ್ಷ ಜುಲೈನಲ್ಲಿ ರಾಜ್ಯಕ್ಕೆ ಬಂದಾಗಿನಿಂದ, ಅವರು ನಿಯಮಿತವಾಗಿ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ, ಪತ್ರಿಕಾ ಸಭೆಗಳನ್ನು ನಡೆಸುತ್ತಿದ್ದಾರೆ ಮತ್ತು ಟಿವಿ ಚರ್ಚೆಗಳಲ್ಲಿ ಭಾಗವಹಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಅಲ್ಲಿ ಅವರು ನಿಯಮಿತವಾಗಿ ರಾಜ್ಯ ಸರ್ಕಾರ, ನಮ್ಮ ಅಧಿಕಾರಿಗಳು, ಮಂತ್ರಿಗಳು, ಮುಖ್ಯಮಂತ್ರಿ, ಒಮ್ಮೆ ವಿಧಾನಸಭೆಯ ಸ್ಪೀಕರ್ ವಿರುದ್ಧವೂ ಮಾತನಾಡಿದ್ದಾರೆ. ಅಂತಹ ಪ್ರತಿಯೊಂದು ಕ್ರಮವೂ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ರಾಯ್ ಹೇಳಿದ್ದಾರೆ.

SCROLL FOR NEXT