ದೇಶ

ಮಧ್ಯ ಪ್ರದೇಶ: ಮಕ್ಕಳಿಗೆ ಅಲ್ಲ.. ಬದಲಿಗೆ ಸಾಕು ನಾಯಿಗೆ ಅರ್ಧ ಆಸ್ತಿ ಬರೆದ ಪಂಚಾಯಿತಿ ಮುಖ್ಯಸ್ಥ!

Srinivasamurthy VN

ಚೆಂದ್ವಾರಾ: ಸಾಮಾನ್ಯವಾಗಿ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವುದು ವಾಡಿಕೆ... ಆದರೆ ಮಧ್ಯ ಪ್ರದೇಶದ ರೈತ ಮತ್ತು ಪಂಚಾಯಿತಿ ಮುಖ್ಯಸ್ಥ ತನ್ನ ಸಾಕು ನಾಯಿಗೆ ಅರ್ಧ ಆಸ್ತಿ ಬರೆದು ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಮಧ್ಯಪ್ರದೇಶದ ಚಿಂದ್ವಾರಾದ ಬಡಾ ಗ್ರಾಮದ ರೈತ 50 ವರ್ಷದ ಓಂ ನಾರಾಯಣ್ ವರ್ಮಾ ತಮ್ಮ ಸಾಕು ನಾಯಿಗೆ ಅರ್ಧ ಆಸ್ತಿ ಬರೆದು ವಿಲ್ ಮಾಡಿಸಿದ್ದಾರೆ. ಸುಮಾರು 21 ಎಕರೆ ಭೂಮಿ ಮತ್ತು ಇತರೆ ಆಸ್ತಿಗಳೊಂದಿಗೆ ಸಿರಿವಂತರಾಗಿರುವ ಇವರು, ತಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು 11 ತಿಂಗಳ ನಾಯಿ ಜಾಕಿ ಹೆಸರಿಗೆ ವಿಲ್ ಮಾಡಿಸಿದ್ದು, ಉಳಿದ ಆಸ್ತಿಯನ್ನು ತಮ್ಮ ಎರಡನೆಯ ಪತ್ನಿ ಚಂಪಾ ಅವರ ಹೆಸರಿಗೆ ಮಾಡಿಸಿದ್ದಾರೆ. ವಿಲ್ ನಲ್ಲಿ 21 ಎಕರೆ ಕೋಟ್ಯಂತರ ಬೆಲೆ ಬಾಳುವ ತೋಟವಿದ್ದು, ಇದಲ್ಲದೆ ಇನ್ನೂ ಕೆಲವು ಆಸ್ತಿಗಳು ಸೇರಿವೆ.

ಇನ್ನು ನಾರಾಯಣ್ ಸಾಕು ನಾಯಿಗೆ ವಿಲ್ ಬರೆದಿರುವುದರಿಂದ ಅವರಿಗೆ ಮಕ್ಕಳಾರು ಇಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಆದರೆ ಓಂ ನಾರಾಯಣ್ ಅವರಿಗೆ ಒಬ್ಬರಲ್ಲ ಇಬ್ಬರಲ್ಲ ಬರೊಬ್ಬರಿ 5 ಜನ ಮಕ್ಕಳಿದ್ದಾರೆ. ಮೊದಲ ಪತ್ನಿಗೆ ಓರ್ವ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಎರಡನೇ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರಾರ ಹೆಸರಿಗೂ ನಾರಾಯಣ್ ಆಸ್ತಿ ನೀಡದೇ ತಮ್ಮ ಕೊನೆಗಾಲದಲ್ಲಿ ನೋಡಿಕೊಳ್ಳುತ್ತಿರುವ 2ನೇ ಪತ್ನಿ ಹಾಗೂ ತಮಗೆ ಸಾಥ್ ನೀಡುತ್ತಿರುವ ಸಾಕು ನಾಯಿ ಜಾಕಿ ಹೆಸರಿಗೆ ಆಸ್ತಿ ಬರೆದು ವಿಲ್ ಮಾಡಿದ್ದಾರೆ.

ಮೂಲಗಳ ಪ್ರಕಾರ ಓಂ ನಾರಾಯಣ್ ಮತ್ತು ಅವರ ಕುಟುಂಬಸ್ಥರೊಂದಿಗೆ ಕಳೆದ ಹಲವು ದಿನಗಳಿಂದ ಆಸ್ತಿ ವಿಚಾರವಾಗಿ ಪದೇ ಪದೇ ಜಗಳವಾಗುತ್ತಿತ್ತು. ಈ ಬಗ್ಗೆ ಮಾತನಾಡಿರುವ ಓಂ ನಾರಾಯಣ್ ಅವರು, ಮಗನ ನಡವಳಿಕೆ ಸರಿ ಇಲ್ಲ. ನನ್ನನ್ನು ಇಲ್ಲಿಯವರೆಗೆ ನೋಡಿಕೊಳ್ಳುತ್ತಿರುವುದು ನನ್ನ 2ನೇ ಪತ್ನಿ ಚಂಪಾ ಹಾಗೂ ನನ್ನ ನಾಯಿ ಜಾಕಿ. ಇವರಿಬ್ಬರನ್ನು ಬಿಟ್ಟರೆ ಯಾರ ಮೇಲೂ ನನಗೆ ನಂಬಿಕೆ ಇಲ್ಲ. ನನ್ನ ಸಾವಿನ ನಂತರ ಜಾಕಿ ಅನಾಥವಾಗಬಾರದು. ಅದನ್ನು ನನ್ನ ಪತ್ನಿ ನೋಡಿಕೊಳ್ಳುವ ಭರವಸೆ ನನಗೆ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ನನ್ನ ಬಳಿಕ ಇಬ್ಬರಿಗೂ ಅನ್ಯಾಯ ಆಗಬಾರದು ಎಂದು ಅವರ ಹೆಸರಿಗೆ ವಿಲ್ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ.

ಅಂತೆಯೇ ನಾಯಿಯ ಹೆಸರಿನಲ್ಲಿ ಇರುವ ಆಸ್ತಿ ಯಾರಿಗೆ ಎಂಬ ಬಗ್ಗೆಯೂ ವಿಲ್‌ನಲ್ಲಿ ಮಾಹಿತಿ ನೀಡಿರುವ ಓಂ ನಾರಾಯಣ್ ಅವರು, ನನ್ನ ಮರಣದ ನಂತರ ನನ್ನ ಜೀವದ ಗೆಳೆಯನಾಗಿರುವ ಜಾಕಿಗೆ ಯಾವುದೇ ಅನಾಹುತ ಸಂಭವಿಸಬಾರದು. ನನ್ನ ಪತ್ನಿ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವ ಭರವಸೆ ಇದೆ. ಈ ನಾಯಿಯನ್ನು ಯಾರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರೇ ಅದರ ಹೆಸರಿನಲ್ಲಿ ಇರುವ ಆಸ್ತಿಯ ಉತ್ತರಾಧಿಕಾರಿಯಾಗುತ್ತಾರೆ ಎಂದು ವಿಲ್‌ನಲ್ಲಿ ಬರೆಸಿದ್ದಾರೆ.

ಈ ನಾರಾಯಣ್ ಅವರ ವಿಲ್ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ವಿಲ್ ಬದಲಾಯಿಸುವಂತೆ ಗ್ರಾಮದ ಮುಖಂಡರಿಂದ ಒತ್ತಾಯ ಬಂದಿದೆ. ಸ್ವತಃ ಇಲ್ಲಿನ ಚೆಂದ್ವಾರದ ಸಂಸದ ರಿಷಿ ವೈಷ್ಣವ್ ಅವರು ಮಾತನಾಡಿ ನಾರಾಯಣ್ ಅವರು ತಮ್ಮ ಮಕ್ಕಳಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಈ ರೀತಿ ವಿಲ್ ಮಾಡಿಸಿದ್ದಾರೆ. ಅವರ ಕುಟುಂಬದ ಸಮಸ್ಯೆ ಈಗ ಬಗೆಹರಿದಿದೆ ಎಂದು ಹೇಳಿದ್ದಾರೆ, ಇದಾಗ್ಯೂ ಯಾವುದೇ ಕಾರಣಕ್ಕೂ ನಾನು ವಿಲ್ ಬದಲಾಯಿಸುವುದಿಲ್ಲ ಎಂದು ಖಡಾಖಂಡಿತವಾಗಿ ನಾರಾಯಣ್ ಹೇಳಿದ್ದಾರೆ.

ಅಂತೆಯೇ ಆಸ್ತಿ ವಿಚಾರವಾಗಿ ನಾನು ನನ್ನ ಕುಟುಂಬಸ್ಥರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದೇನೆ. ವಿಲ್ ನಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದೂ ಹೇಳಿದ್ದಾರೆ. 

SCROLL FOR NEXT