ದೇಶ

ಶಾಹೀನ್ ಬಾಗ್ ಶೂಟರ್ ಎಎಪಿ ಸದಸ್ಯ: ದೆಹಲಿ ಪೊಲೀಸರ ಹೇಳಿಕೆ 

Nagaraja AB

ನವದೆಹಲಿ: ಸಿಎಎ ವಿರೋಧಿಸಿ ಕಳೆದ 50 ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿರುವ ಶಾಹೀನ್ ಬಾಗ್ ನಲ್ಲಿ  ಫೆಬ್ರವರಿ 1 ರಂದು ಗಾಳಿಯಲ್ಲಿ  ಗುಂಡು ಹಾರಿಸಿದ  ಕಪಿಲ್ ಗುಜ್ಜಾರ್ ಆಮ್ ಆದ್ಮಿ ಪಕ್ಷದ ಸದಸ್ಯನೆಂಬುದನ್ನು ದೆಹಲಿ ಪೊಲೀಸರು ಬಯಲು ಗೊಳಿಸಿದ್ದಾರೆ.

ಕಪಿಲ್ ಗುಜ್ಜಾರ್ ನಿಂದ ವಶಪಡಿಸಿಕೊಳ್ಳಲಾಗಿದ್ದ  ಮೊಬೈಲ್ ನಲ್ಲಿದ್ದ ಪೋಟೋಗಳ ಆಧಾರದ ಮೇಲೆ  ಆತ ಎಎಪಿ ಸದಸ್ಯನೆಂಬುದನ್ನು ಪೊಲೀಸರು ಹೇಳಿದ್ದಾರೆ. ಎಎಪಿಯ ಮುಖಂಡರೊಂದಿಗೆ ಗುಜ್ಜಾರ್ ಹಾಗೂ ಆತನ ತಂದೆ ಪೋಟೋಗಳನ್ನು ತೆಗೆಸಿಕೊಂಡಿದ್ದಾರೆ.

ಕಪಿಲ್ ಗುಜ್ಜಾರ್ ಅವರ ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದ್ದು, ಆತ ಹಾಗೂ ಆತನ ತಂದೆ ಎಎಪಿಗೆ ಸೇರ್ಪಡೆಯಾಗಿರುವ ಪೋಟೋಗಳು ಹಾಗೂ ವಾಟ್ಸಾಪ್ ಮಾಹಿತಿಯನ್ನು ಕಲೆ ಹಾಕಿರುವುದಾಗಿ ಅಪರಾಧ ವಿಭಾಗದ ಡಿಸಿಪಿ ರಾಜೇಶ್ ಡಿಯೋ ತಿಳಿಸಿದ್ದಾರೆ.

ಅತಿಶಿ, ಸಂಜಯ್ ಸಿಂಗ್ ಅವರಂತಹ ಎಎಪಿ ಮುಖಂಡರೊಂದಿಗೆ ಕಪಿಲ್ ಗುಜ್ಜಾರ್ ಹಾಗೂ ಆತನ ತಂದೆ ಗಾಜೆ ಸಿಂಗ್ ತೆಗೆಸಿಕೊಂಡಿರುವ ಪೊಟೋಗಳು ಆತನಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ನಲ್ಲಿದೆ. ತನಿಖೆಗಾಗಿ ಆತನ ಪೋನ್ ನಲ್ಲಿದ್ದ ಪೋಟೋಗಳನ್ನು ವಶಕ್ಕೆ ಪಡೆಯಲಾಗಿದೆ. 2019ರ ಜನವರಿ-ಫೆಬ್ರವರಿ ತಿಂಗಳ ಮಧ್ಯದಲ್ಲಿ ತಮ್ಮ ತಂದೆಯೊಂದಿಗೆ ಎಎಪಿ ಸೇರ್ಪಡೆಯಾಗಿದ್ದಾಗಿ  ಕಪಿಲ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಜೇಶ್ ಡಿಯೋ ಹೇಳಿದ್ದಾರೆ.

ಈ ಮಧ್ಯೆ ಎಎಪಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಜ್ರಿವಾಲ್ ದೇಶದ ಭದ್ರತೆ ಜೊತೆಗೆ ನಾಟಕವಾಡುತ್ತಿದ್ದಾರೆ. ಜನರು ಎಎಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಆದಾಗ್ಯೂ, ಪೊಲೀಸರ ಹೇಳಿಕೆಯನ್ನು ಕಪಿಲ್ ಕುಟುಂಬ ತಿರಸ್ಕರಿಸಿದೆ. ಈ ಪೋಟೋಗಳು ಎಲ್ಲಿಂದ ಹಂಚಿಕೆಯಾದವು ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದು ಕಪಿಲ್ ಅಂಕಲ್ ಪತೇಶ್ ಸಿಂಗ್ ಹೇಳಿದ್ದಾರೆ. 

SCROLL FOR NEXT