ದೇಶ

ಶಾಹೀನ್ ಬಾಗ್ ಪ್ರತಿಭಟನೆ ವೇಳೆ ನವಜಾತ ಶಿಶು ಸಾವು; ಕೇಂದ್ರ, ದೆಹಲಿ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್

Srinivasamurthy VN

ನವದೆಹಲಿ: ಶಾಹೀನ್ ಬಾಗ್ ಪ್ರತಿಭಟನೆ ವೇಳೆ ನವಜಾತ ಶಿಶು ಸಾವನ್ನಪ್ಪಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿರುವ ಸುಪ್ರೀಂ ಕೋರ್ಟ್, ಸರ್ಕಾರ ಹಾಗೂ ಪೊಲೀಸರಿಗೆ ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಿದೆ. 

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ 50 ದಿನಗಳಿಂದ ದೆಹಲಿಯ ಶಾಹೀನ್ ಬಾಗ್ ನಲ್ಲಿ ನಡೆಸಲಾಗುತ್ತಿರುವ ಪ್ರತಿಭಟನೆಯಲ್ಲಿ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ ಸರ್ಕಾರ ಹಾಗೂ ಪೊಲೀಸರಿಗೆ ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಪ್ರತಿಭಟನೆಯಲ್ಲಿ ಶಿಶುಗಳ ಪಾಲ್ಗೊಳ್ಳುವಿಕೆಗೆ ಅನುಮತಿ ನೀಡಿದ್ದು ಯಾರು ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ಪ್ರಕರಣವನ್ನು ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಇದೇ ವೇಳೆ ಪ್ರಕರಣದ ತುರ್ತು ವಿಚಾರಣೆಗೆ ಕೋರಿದ್ದ ವಕೀಲರ ಮನವಿ ತಿರಸ್ಕರಿಸಿದ ಬೊಬ್ಡೆ ಅವರು ಕಳೆದ ಐವತ್ತು ದಿನಗಶಳಿಂದ ಪ್ರತಿಭಟನೆ ನಡೆಯುತ್ತಿದೆ. 50 ದಿನಗಳ ಕಾಲ ಕಾದಿದ್ದೀರಿ ಎಂದರೆ ಇನ್ನೂ ಒಂದು ವಾರ ಕಾಯಬಹುದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ 17ಕ್ಕೆ ಮುಂದೂಡಿದೆ.

ದೆಹಲಿಯ ಶಾಹೀನ್ ಬಾಗ್ ಪ್ರಕರಣದ ಕುರಿತು ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಅಮಿತ್ ಸಾಹನಿ , ಬಿಜೆಪಿ ಮುಖಂಡ ನಂದಕಿಶೋರ್ ಗರ್ಗ್ ಹಾಗೂ ಇತರರು ಈ ಪ್ರಕರಣದ ವಿಚಾರಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ.ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಪ್ರಕರಣದಲ್ಲಿ ಅರ್ಜಿಗಳನ್ನು ದಾಖಲಿಸಿರುವ ವಕೀಲ ಅಮಿತ್ ಸಾಹನಿ ಹಾಗೂ ಬಿಜೆಪಿ ಮುಖಂಡ ನಂದ ಕಿಶೋರ್ ಗರ್ಗ್, ಶಾಹೀನ್ ಬಾಗ್ ನಲ್ಲಿ ಬಂದಾಗಿರುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ ಈ ಸಂಪೂರ್ಣ ಪ್ರಕರಣದಲ್ಲಿ ನಡೆಸಲಾಗುತ್ತಿರುವ ಹಿಂಸಾಚಾರವನ್ನು ತಡೆಯಲು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳು ನಿಗಾ ವಹಿಸಬೇಕು ಎಂದೂ ಕೂಡ ಕೋರಲಾಗಿದ್ದು, ಪ್ರಕರಣದಲ್ಲಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಕೋರಲಾಗಿದೆ.

SCROLL FOR NEXT