ದೇಶ

ಶೀಘ್ರದಲ್ಲೇ ರಾಜ್ಯಕ್ಕೆ ಜಿಎಸ್‍ಟಿ ನಷ್ಟ ಪರಿಹಾರ: ನಿರ್ಮಲಾ ಸೀತಾರಾಮನ್ ಭರವಸೆ

Srinivasamurthy VN

ಬೆಂಗಳೂರು: ಶೀಘ್ರದಲ್ಲೇ ರಾಜ್ಯದ ಪಾಲಿನ ಜಿಎಸ್ ಟಿ ಪರಿಹಾರದ ಹಣ ಬಿಡುಗಡೆ ಮಾಡುವ ಭರವಸೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ.

ಇತ್ತೀಚೆಗೆ ಮಂಡಿಸಿದ್ದ ಕೇಂದ್ರ ಮುಂಗಡ ಪತ್ರ 2020-21ರ ಕುರಿತು ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಶೀಘ್ರದಲ್ಲೇ ರಾಜ್ಯದ ಜಿಎಸ್‍ಟಿ ತೆರಿಗೆ ನಷ್ಟ ಪರಿಹಾರ ಕೊಡುವ ಭರವಸೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಜಿಎಸ್‍ಟಿ ತೆರಿಗೆ ಬಾಕಿ ಕರ್ನಾಟಕದ ಒಂದೇ ಸಮಸ್ಯೆ ಅಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಜಿಎಸ್‍ಟಿ ತೆರಿಗೆ ನಷ್ಟ ಪರಿಹಾರ ಕೇಂದ್ರದಿಂದ ಬಾಕಿ ಕೊಡಬೇಕಿದೆ. ಕಳೆದ ವರ್ಷ ಕೇಂದ್ರದ ಬಳಿ ಜಿಎಸ್‍ಟಿ ತೆರಿಗೆ ಬಾಕಿ ಕೊಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷದ ಅಂತ್ಯಕ್ಕೆ ಎರಡು ತಿಂಗಳ ಜಿಎಸ್‍ಟಿ ತೆರಿಗೆ ಬಾಕಿ ಇತ್ತು. ಆ ಜಿಎಸ್‍ಟಿ ತೆರಿಗೆ ಪರಿಹಾರವನ್ನು ಕಳೆದ ಡಿಸೆಂಬರ್ ವೇಳೆಯಲ್ಲಿ ರಾಜ್ಯಕ್ಕೆ ನೀಡಲಾಗಿತ್ತು. ಕೊನೆಯ ತ್ರೈಮಾಸಿಕದ ಬಾಕಿಯನ್ನೂ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂತೆಯೇ ಮನ್ರೇಗಾ ಯೋಜನೆಯಲ್ಲಿ ರಾಜ್ಯದ ವೇತನ ಬಾಬ್ತು ಬಾಕಿ ಯಾವುದೂ ಇಲ್ಲ ಎಂದ ನಿರ್ಮಲಾ ಸೀತಾರಾಮನ್, 14ನೇ ಹಣಕಾಸು ಆಯೋಗದ ಅನುದಾನವೂ ಸೇರಿದಂತೆ ಇಲ್ಲಿಯವರೆಗೆ ರಾಜ್ಯಕ್ಕೆ 2.03 ಲಕ್ಷ ಕೋಟಿ ರೂ ನಾನಾ ಅನುದಾನಗಳು ನೀಡಲಾಗಿದೆ ಎಂದರು.

ಬೆಂಗಳೂರು ಉಪನಗರ ರೈಲು ಯೋಜನೆ ಜಾರಿ
ಬೆಂಗಳೂರು ಉಪನಗರದ ರೈಲು ಯೋಜನೆಗೆ 18,600 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಿವಿಧ ವ್ಯಾಪಾರ ಮಂಡಳಿಗಳ ಪ್ರತಿನಿಧಿಗಳು, ಕೈಗಾರಿಕಾ ನಾಯಕರು ಮತ್ತಿತರರೊಂದಿಗೆ ಬಜೆಟ್ ಕುರಿತ ಸಂವಾದದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೀರ್ಘಾವಧಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಈಗಾಗಲೇ ಅನುಮೋದನೆ ನೀಡಿದೆ ಎಂದರು. ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ. 20ರಷ್ಟು ಪಾಲುದಾರಿಕೆ ಹೊಂದಿವೆ. ಉಳಿದ ಶೇ. 60ರಷ್ಟು ಹಣವನ್ನು ಹೊರಗಿನ ಏಜೆನ್ಸಿಗಳಿಂದ ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. ಅದಕ್ಕೆ ಕೇಂದ್ರ ಸರ್ಕಾರ ಗ್ಯಾರಂಟಿ ನೀಡುತ್ತದೆ ಎಂದರು. 

SCROLL FOR NEXT