ದೇಶ

ಜಾರ್ಖಂಡ್ ಜನರ ಹಿತಕ್ಕಾಗಿ ಸಂಸತ್ ವರೆಗೆ ಬಿಜೆಪಿ ಹೋರಾಟ: ಅಮಿತ್ ಶಾ

Lingaraj Badiger

ರಾಂಚಿ: ಚೈಬಾಸಾದಲ್ಲಿ ಬುಡಕಟ್ಟು ಜನಾಂಗದ ಏಳು ಮಂದಿಯ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ  ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಾರ್ಖಂಡ್ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ವಿಷಯವಾಗಿ ಬಿಜೆಪಿ ರಸ್ತೆಗಳಿದು ಪ್ರತಿಭಟಿಸಲಿದ್ದು, ವಿಧಾನಸಭೆ ಮತ್ತು ಸಂಸತ್ ನಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಿದೆ ಎಂದು ಎಚ್ಚರಿಸಿದ್ದಾರೆ.

ಬಾಬುಲಾಲ್ ಮರಂಡಿ ನೇತೃತ್ವದ ಜೆವಿಎಂ-ಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಸಂದರ್ಭವಾಗಿ ರಾಂಚಿಯ ಜಗನ್ನಾಥ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಚೈಬಾಸಾ ಘಟನೆ ಕುರಿತು ಬಿಜೆಪಿ ವರದಿಯೊಂದನ್ನು ಸಲ್ಲಿಸಿದೆ. ಏಳು ಬುಡಕಟ್ಟು ಜನರನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವ್ಯಕ್ತಿಯೊಬ್ಬರನ್ನು ಅವರ ಪತ್ನಿ ಮತ್ತು ಮಕ್ಕಳ ಎದುರೇ ಶಿರಚ್ಛೇದ ಮಾಡಿದ ಘಟನೆಯ ಭಯಾನಕ ಚಿತ್ರಗಳನ್ನು ತಾವು ಹಿಂದೆಂದೂ ನೋಡಿಲ್ಲ ಎಂದು ಹೇಳಿದರು.

‘ಜಾರ್ಖಂಡ್ ಪ್ರತ್ಯೇಕ ರಾಜ್ಯವಾಗಲು ಕಾರಣರಾದ ಅಟಲ್ ಬಿಹಾರಿ ವಾಜಪೇಯಿ ಅವರು, ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದರು. ಜಾರ್ಖಂಡ್ ನಾಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅನುಮತಿಸುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ನೀಡಿದ ಜನಾದೇಶವನ್ನು ಬಿಜೆಪಿ ಸ್ವೀಕರಿಸಿದ್ದು, ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಜನ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ರೂಪಿಸುವ ನೀತಿಗಳು ಇಲ್ಲವೇ ಕಾರ್ಯಕ್ರಮಗಳಿಗೆ ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದೆ. ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಉಗ್ರವಾದದಲ್ಲಿ ರಾಜಿಯಾಗುವುದಿಲ್ಲ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಯುವಿಕೆ ಮುಗಿದಿದೆ. ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಸ್ಟ್ ರಚಿಸುವುದಾಗಿ ಘೋಷಿಸಿದ್ದು, ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವನ್ನು ಟ್ರಸ್ಟ್ ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT