ದೇಶ

ಭಾರತೀಯರ ಸ್ಥಳಾಂತರ: ವಿಮಾನಕ್ಕೆ ಅನುಮೋದನೆ ನೀಡಲು ಚೀನಾ ವಿಳಂಬ!

Sumana Upadhyaya

ನವದೆಹಲಿ: ಕೊರೊನಾ ವೈರಸ್ ನಿಂದ ತತ್ತರಿಸಿ ಹೋಗಿರುವ ಚೀನಾದ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ನೆರವು ಮತ್ತು ಅಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ವಿಶೇಷ ಭಾರತೀಯ ವಿಮಾನಕ್ಕೆ ಅನುಮೋದನೆ ನೀಡಲು ಚೀನಾ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಭಾರತದ ಸ್ಥಳಾಂತರ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿ ಮೋಸ ಮಾಡುತ್ತಿದೆ ಎಂದು ತಿಳಿದುಬಂದಿದೆ.


ಆದರೆ ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಹಾರಾಟಕ್ಕೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿಲ್ಲ ಎಂದು ಚೀನಾ ಹೇಳಿದೆ.


ಬೇರೆ ದೇಶಗಳಿಂದ ಚೀನಾದ ವುಹಾನ್ ಪ್ರಾಂತ್ಯಕ್ಕೆ ಪರಿಹಾರ ಕಾರ್ಯ ಮತ್ತು ಜನರ ಸ್ಥಳಾಂತರಕ್ಕೆ ಸುಲಭವಾಗಿ ವಿಮಾನಗಳು ಹಾರಾಟ ನಡೆಸುತ್ತಿವೆ. ಆದರೆ ಭಾರತದ ವಿಮಾನಗಳಿಗೆ ಏಕೆ ವಿಳಂಬ ಮಾಡುತ್ತಿದೆ? ಭಾರತ ಸರ್ಕಾರದ ನೆರವನ್ನು ಪಡೆಯಲು ಚೀನಾಕ್ಕೆ ಆಸಕ್ತಿಯಿಲ್ಲವೇ, ವುಹಾನ್ ನಿಂದ ಭಾರತೀಯರನ್ನು ಸ್ಥಳಾಂತರ ಮಾಡುವುದಕ್ಕೆ ಅದೇಕೆ ತಡೆಯೊಡ್ಡುತ್ತಿದೆ ಎಂದು ಭಾರತೀಯ ಮೂಲ ಪ್ರಶ್ನಿಸಿದೆ.


ಈ ತಿಂಗಳ ಆರಂಭದಲ್ಲಿ ವುಹಾನ್ ನಿಂದ ಭಾರತ 647 ಭಾರತೀಯರನ್ನು ಮತ್ತು ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನು ಎರಡು ವಿಶೇಷ ಏರ್ ಇಂಡಿಯಾ ವಿಮಾನಗಳಲ್ಲಿ ಸ್ಥಳಾಂತರಿಸಿದೆ.


ವುಹಾನ್ ನಲ್ಲಿರುವ ಭಾರತೀಯರು ವಿಮಾನಕ್ಕಾಗಿ ಕಾಯುತ್ತಿದ್ದು ತಮ್ಮನ್ನು ಆದಷ್ಟು ಬೇಗನೆ ಭಾರತಕ್ಕೆ ಸ್ಥಳಾಂತರಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ವಿಳಂಬದಿಂದಾಗಿ ಅವರು ಮತ್ತು ಅವರ ಕುಟುಂಬದವರಿಗೆ ತೀವ್ರ ನೋವು ಮತ್ತು ಆತಂಕವುಂಟಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT