ದೇಶ

ಅಭಿವೃದ್ಧಿ ಮತ್ತು ಪರಿಸರ ಸಮತೋಲನದಲ್ಲಿ ನ್ಯಾಯಾಂಗ ವ್ಯವಸ್ಥೆ ಪಾತ್ರ ಅನನ್ಯ: ಪ್ರಧಾನಿ ನರೇಂದ್ರ ಮೋದಿ

Raghavendra Adiga

ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸ್ಪಷ್ಟ ಸಮತೋಲನ ಸಾಧಿಸಿದ್ದು, ನ್ಯಾಯಾಲಯಗಳು ನೀಡುವ ತೀರ್ಪುಗಳನ್ನು ದೇಶದ 130 ಕೋಟಿ ಜನ ತೆರೆದ ಹೃದಯದಿಂದ ಸ್ವಾಗತಿಸುತ್ತಾರೆ ಎಂದು  ಪ್ರಧಾನಮಂತ್ರಿ ನರೇಂದ್ರಮೋದಿ ಶ್ಲಾಘಿಸಿದ್ದಾರೆ. 

ತ್ವರಿತ ಪ್ರಗತಿ ಮತ್ತು ಪರಿಸರ ಸಂರಕ್ಷಣೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎನ್ನುವ ಕಾಲವೊಂದಿತ್ತು. ಆದರೆ, ಈ ಬಗ್ಗೆ ಭಾರತ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದು, ದೇಶದ ಹಸಿರು ವಲಯವನ್ನು ಹೆಚ್ಚಿಸಿಕೊಳ್ಳುತ್ತಲೇ ಪ್ರಗತಿಪಥದಲ್ಲಿ ದಾಪುಗಾಲಿಡುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಸುಪ್ರೀಂಕೋರ್ಟ್ ಆಯೋಜಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ನ್ಯಾಯಾಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಮತ್ತಷ್ಟು ಅಳವಡಿಸಿಕೊಳ್ಳುವ ಅಗತ್ಯವಿದೆ. ಭಾರತದ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿ ನ್ಯಾಯದಾನಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸಂಯೋಜಿತ ಅಭಿಯಾನದ ಮೂಲಕ ದೇಶದ ಪ್ರತಿಯೊಂದು ನ್ಯಾಯಾಲಯವನ್ನು ಆನ್‌ಲೈನ್ ಮೂಲಕ ಜೋಡಿಸಲು ಸರ್ಕಾರ ತೀವ್ರ ಪ್ರಯತ್ನ ನಡೆಸಿದೆ. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲದ ಸೃಷ್ಟಿಯಿಂದಾಗಿ ನ್ಯಾಯಾಲಯಗಳ ಕಲಾಪಗಳು ಸುಗಮವಾಗಲಿವೆ ಎಂದರು. 

ಕಾನೂನು ಸವೋಚ್ಛವಾದದ್ದು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನತೆ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ. ಅಯೋಧ್ಯೆ ಭೂ ವಿವಾದ ಕುರಿತಂತೆ ಸುಪ್ರೀಂಕೋರ್ಟ್‌ನ ಇತ್ತೀಚಿನ ನಿರ್ಧಾರಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದರು. ನ್ಯಾಯಾಲಯದ ತೀರ್ಪಿನ ಮೊದಲು ಈ ಬಗ್ಗೆ ದೇಶದಲ್ಲಿ ಗಂಭೀರ ಸಮಾಲೋಚನೆಗಳು, ಚರ್ಚೆಗಳು ನಡೆದಿದ್ದವು. ಆದರೂ ನ್ಯಾಯಾಲಯದ ತೀರ್ಪನ್ನು ದೇಶದ ೧೩೦ ಕೋಟಿ ಜನತೆ ಹೃತ್ಪೂರ್ವಕವಾಗಿ ಸ್ವೀಕರಿಸಿದರು ಎಂದರು. 

ದೇಶದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ಪರಸ್ಪರ ಗೌರವ ಹೊಂದಿರಬೇಕು ಎನ್ನುವ ಸಂವಿಧಾನದ ಆಶಯಗಳನ್ನು ಮುಂದುವರೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.  ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಪ್ರಸ್ತುತ ಉಪಯೋಗಕ್ಕೆ ಬಾರದ ಒಂದೂವರೆ ಸಾವಿರಕ್ಕೂ ಹೆಚ್ಚು ಕಾನೂನುಗಳನ್ನು ಸರ್ಕಾರ ರದ್ದು ಮಾಡಿದೆ ಹಾಗೂ ಕಾಲಕ್ಕೆ ತಕ್ಕಂತಹ ನೂತನ ಕಾನೂನುಗಳನ್ನು ರೂಪಿಸಲಾಗಿದೆ. ತ್ರಿವಳಿ ತಲಾಖ್ ರದ್ದು, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಕುರಿತ ಕಾನೂನುಗಳು ಇದಕ್ಕೆ ಉದಾಹರಣೆಯಾಗಿವೆ ಎಂದು ಅವರು ಹೇಳಿದರು. 

ಮುಖ್ಯನ್ಯಾಯಾಧೀಶ ಎಸ್.ಎ.ಬೋಬ್ಡೆ, ದೇಶದ ಸಂವಿಧಾನ ಬಲವಾದ ಮತ್ತು ಸ್ವತಂತ್ರವಾದ ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಿದೆ. ಈ ಮೂಲ ಕಾಳಜಿಗಳು ಸಡಿಲವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು. ಕಾನೂನು ಮತ್ತು ನ್ಯಾಯ ಸಚಿವಾಲಯದ ಮಂತ್ರಿ ರವಿಶಂಕರ ಪ್ರಸಾದ್ ಮಾತನಾಡಿ, ಭ್ರಷ್ಟ ಮತ್ತು ಆತಂಕವಾದಿ ಜನರಿಗೆ ಖಾಸಗಿತನದ ಹಕ್ಕು ಇರುವುದಿಲ್ಲ ಹಾಗೂ ಇಂತಹ ವ್ಯಕ್ತಿಗಳು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳಲು ಅವಕಾಶವಿರಬಾರದು ಎಂದರು.

SCROLL FOR NEXT