ದೇಶ

ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರ, ನಾನು ಯಾವುದೇ ಪ್ರಸ್ತಾಪ ಮಾಡಲ್ಲ: ಟ್ರಂಪ್

Manjula VN

ನವದೆಹಲಿ: ಭಾರತದಲ್ಲಿ ವಿವಾದ ಎಬ್ಬಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋಜಿ ಜತೆಗಿನ ಮಾತುಕತೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತಾಪಿಸಬಹುದು ಎಂಬುದು ಇದೀಗ ಹುಸಿಯಾಗಿದೆ. ಈ ವಿಚಾರದ ಬಗ್ಗೆ ನಾನು ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಭಾರತಕ್ಕೆ ಬಿಟ್ಟ ವಿಚಾರ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. 

ರಾಜಧಾನಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮೋದಿ ಅವರ ಜೊತೆಗೆ ಮಾತನಾಡಿದೆ. ಮೋದಿ ಅವರು ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡುವುದು ನನ್ನ ನಿಲುವು ಎಂದರು. ಅಲ್ಲದೆ, ಮುಕ್ತ ಹಾಗೂ ಅಸಾಧಾರಣ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಭಾರತ ಶ್ರಮಿಸಿದೆ ಎಂದೂ ಹೇಳಿದರು. 

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ನಡೆದಿರುವ ಹಿಂಸಾಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆ ಬಗ್ಗೆ ಕೇಳಿದ್ದೇನೆ. ಆದರೆ, ಮೋದಿ ಜೊತೆ ನಾನು ಈ ಬಗ್ಗೆ ಚರ್ಚಿಸಲಿಲ್ಲ. ಅದು ಭಾರತಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು. 

ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಒಂದು ಸಮುದಾಯ ಪ್ರತಿಭಟನೆ ನಡೆಸುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಆ ಬಗ್ಗೆ ನಾನು ಚರ್ಚಿಸಲು ನಾನು ಇಷ್ಟಪಡಲ್ಲ ಎಂದರು. ತಮ್ಮ ಜನರಿಗಾಗಿ ಅವರು ಸೂಕ್ತ ನಿರ್ಧಾರ ಕೈಗೊಳ್ಲುತ್ತಾರೆ ಎಂಬ ವಿಶ್ವಾಸವಿದೆ. ಅದು ಭಾರತಕ್ಕೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದ ಟ್ರಂಪ್, ಭಾರತದಲ್ಲಿ ಮುಸ್ಲಿಮರ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಮೋದಿ ನನಗೆ ಹೇಳಿದರು ಎಂದು ನುಡಿದರು. 

ಈ ನಡುವೆ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರೀಂಗ್ಲಾ ಪ್ರತ್ಯೇಕ ಹೇಳಿಕೆ ನೀಡಿ, ಮೋದಿ-ಟ್ರಂಪ್ ಮಾತುಕತೆ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಚರ್ಚೆ ನಡೆಯಲಿಲ್ಲ. ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಯಿತು. ಎರಡೂ ದೇಶಗಳಲ್ಲಿ ಬಹುತ್ವ ಇರುವ ಬಗ್ಗೆ ಉಭಯ ನಾಯಕರು ಪ್ರಶಂಸೆ ವ್ಯಕ್ತಪಡಿಸಿದರು ಎಂದರು.

SCROLL FOR NEXT