ದೇಶ

ಗಣರಾಜ್ಯೋತ್ಸವ ಪರೇಡ್ ಗಾಗಿ ಪಶ್ಚಿಮ ಬಂಗಾಳ ಸ್ತಬ್ಧಚಿತ್ರ ಪ್ರಸ್ತಾಪವನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ 

Nagaraja AB

ಕೊಲ್ಕತ್ತಾ: ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಗಾಗಿ ಪಶ್ಚಿಮ ಬಂಗಾಳ ಪ್ರಸ್ತಾಪಿಸಿದ ಸ್ತಬ್ಧ ಚಿತ್ರವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಭಿನ್ನಾಭಿಪ್ರಾಯ ಉಂಟಾಗಿದೆ. 

ಪಶ್ಚಿಮ ಬಂಗಾಳ ಪ್ರಸ್ತಾಪಿತ ಸ್ತಬ್ಧಚಿತ್ರವನ್ನು ಎರಡು ಸುತ್ತಿನ ಸಭೆಯಲ್ಲಿ ತಜ್ಞರ ಸಮಿತಿ ಪರೀಶಿಲಿಸಿದ್ದು, ಎರಡನೇ ಸಭೆಯಲ್ಲಿ ಚರ್ಚಿಸಿದ ಬಳಿಕ  ಸಮಿತಿಯಿಂದ ಮುಂದಿನ ಪರಿಗಣನೆಗಾಗಿ ತೆಗೆದುಕೊಂಡಿಲ್ಲ ಎಂದು ಸಚಿವಾಲಯ  ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಪರೇಡ್ ಗಾಗಿ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ, ಆರು ಸಚಿವಾಲಯಗಳು ಮತ್ತು ಇಲಾಖೆಗಳ 22 ಪ್ರಸ್ತಾಪಿತ ಸ್ತಬ್ಧ ಚಿತ್ರಗಳ ಕಿರುಪಟ್ಟಿಯನ್ನು ತಯಾರಿಸಲಾಗಿದೆ.  32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 24 ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಸ್ತಾಪಿತ 56ಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ಸಂಗ್ರಹವನ್ನು ಕಿರುಪಟ್ಟಿಗಾಗಿ  ಕೇಂದ್ರಸರ್ಕಾರ ಸ್ವೀಕರಿಸಿತ್ತು. 

ಸಂದೇಶ, ಪರಿಕಲ್ಪನೆ, ವಿನ್ಯಾಸ, ದೃಶ್ಯ ಸಂಯೋಜನೆ ಆಧಾರದ ಮೇಲೆ ತಜ್ಞರ ಸಮಿತಿ ಪ್ರಸ್ತಾಪಿತ ಸ್ತಬ್ಧಚಿತ್ರಗಳನ್ನು ಪರಿಶೀಲಿಸಿದೆ. ಸಮಯದ ಅಭಾವದ ಹಿನ್ನೆಲೆಯಲ್ಲಿ ಪರೇಡ್ ನಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಆದಾಗ್ಯೂ, ತಮ್ಮ ರಾಜ್ಯದ ಸ್ತಬ್ಧಚಿತ್ರ ಆಯ್ಕೆ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ನೀರು ಸಂರಕ್ಷಣೆ ಮತ್ತಿತರ ಪಶ್ಚಿಮ ಬಂಗಾಳದಲ್ಲಿನ ಅಭಿವೃದ್ದಿಯ ಸಂದೇಶವನ್ನಿಟ್ಟುಕೊಂಡು ಅನೇಕ ಪ್ರಸ್ತಾಪಗಳನ್ನು ಕಳುಹಿಸಲಾಗಿದೆ. ಅದಕ್ಕೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂಬ ವಿಶ್ವಾಸ ಹೊಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

SCROLL FOR NEXT