ದೇಶ

ಕೋಟಾದಲ್ಲಿ 102 ನವಜಾತ ಶಿಶುಗಳ ಸಾವು: ರಾಜಸ್ಥಾನ ಸಿಎಂರಿಂದ ವಿವರ ಕೇಳಿದ ಸೋನಿಯಾ

Srinivasamurthy VN

ನವದೆಹಲಿ: ರಾಜಸ್ಥಾನದ ಕೋಟಾದಲ್ಲಿ ಸಂಭವಿಸುತ್ತಿರುವ ನವಜಾತ ಶಿಶುಗಳ ಸರಣಿ ಸಾವಿನ ಕುರಿತಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಅವರಿಂದ ವಿವರ ಕೇಳಿದ್ದಾರೆ.

ರಾಜಸ್ಥಾನದ ಕೋಟಾದಲ್ಲಿ ಕಳೆದ 2 ದಿನಗಳಲ್ಲಿ 8 ನವಜಾತ ಶಿಶುಗಳು ಸಾವನ್ನಪ್ಪುವ ಮೂಲಕ ಮಕ್ಕಳ ಸಾವಿನ ಸರಣಿ ಮುಂದುವರೆದಿದೆ. ಈ ಕುರಿತಂತೆ ಸ್ವತಃ ಜಿಲ್ಲಾಸ್ಪತ್ರೆಯ ವರಿಷ್ಠಾಧಿಕಾರಿ ಡಾ. ಅಮೃತ್ ಲಾಲ್ ಅವರು ಮಾತನಾಡಿ, ವಿವಿಧ ಕಾರಣಗಳಿಂದಾಗಿ ಕೋಟಾ ಜಿಲ್ಲಾಸ್ಪತ್ರೆಯಲ್ಲಿ 8 ಮಕ್ಕಳು ಸಾವನ್ನಪ್ಪಿದ್ದಾರೆ. ಆ ಮೂಲಕ ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಅಂದರೆ 100 ಮಕ್ಕಳು ಸಾವನ್ನಪ್ಪಿವೆ. ಪ್ರಸ್ತುತ ಮಕ್ಕಳ ಸಾವಿನ ಕುರಿತು ವೈದ್ಯರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.

ಆದರೆ ಇದೀಗ ಈ ವಿಚಾರ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಮಕ್ಕಳ ಸಾವಿನ ಸಂಖ್ಯೆ ಕುರಿತು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಅವಿನಾಶ್​​ ಪಾಂಡೆಯಿಂದ ವಿವರಣೆ ಪಡೆದಿದ್ದು, ಘಟನೆ ಬಗ್ಗೆ ಸಿಎಂ ಅಶೋಕ್​ ಗೆಹ್ಲೋಟ್​ ಕೂಡ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇನ್ನು ಈ ಕುರಿತು ಸರಣಿ ಟ್ವೀಟ್​ ಮಾಡಿರುವ ಅವರು, ಮಕ್ಕಳ ಸಾವಿನ ಸುದ್ದಿ ಬಗ್ಗೆ ನಮ್ಮ ಸರ್ಕಾರ ಸೂಕ್ಷ್ಮಮತಿಯಾಗಿ ವರ್ತಿಸುತ್ತಿದೆ. ಆದರೆ, ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂಬ ಮನವಿ ಮಾಡಿದ್ದಾರೆ.

ಅಂತೆಯೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಕೂಡ ಈ ಕುರಿತಂತೆ ಸಿಎಂ ಗೆಹ್ಲೂಟ್ ಅವರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಮಕ್ಕಳ ಸಾವಿನ ಸರಣಿ ಮುಂದುವರೆದಿದ್ದು, ಆರಂಭದಲ್ಲೇ ಏಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಛಾಟಿ ಬೀಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಮಕ್ಕಳ ಸಾವು ಮುಂದುವರೆಯದಂತೆ ಕಠಿಣ ಕ್ರಮ ಕೈಗೊಳ್ಳುವಂತೆ, ನಿರ್ಲಕ್ಷ್ಯ ತೋರಿದ ವೈದ್ಯಕೀಯ ಸಿಬ್ಬಂದಿಗಳ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಡಿಸೆಂಬರ್​ ತಿಂಗಳಲ್ಲಿ ಕನಿಷ್ಟ ಎಂದರೂ 100 ಮಕ್ಕಳು ಸಾವನ್ನಪ್ಪಿದ್ದು, ಇದಕ್ಕೆ ಮುಖ್ಯ ಕಾರಣ ಮಕ್ಕಳ ತೂಕದ ಸಮಸ್ಯೆ ಎಂದು ಆಸ್ಪತ್ರೆಯ ಸೂಪರಿಟೆಂಡ್​ ಡಾ. ಸುರೇಶ್​​ ದುಲರಾ ತಿಳಿಸಿದ್ದಾರೆ.

SCROLL FOR NEXT