ದೇಶ

ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಟ್ವಿಸ್ಟ್: ಶಂಕಿತ ದಾಳಿಕೋರರ ಪಟ್ಟಿಯಲ್ಲಿ ಐಶೆ ಘೋಷ್ ಹೆಸರು!

Srinivasamurthy VN

ನವದೆಹಲಿ: ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆಗೆ ದೆಹಲಿ ಪೊಲೀಸರು ಹೊಸ ಟ್ವಿಸ್ಟ್ ನೀಡಿದ್ದು, ಅಂದು ಪ್ರತಿಭಟನೆ ನಡೆಸುತ್ತಿದ್ದ ಜೆಎನ್ಎಸ್ ಯು ಅಧ್ಯಕ್ಷೆ ಐಶೆ ಘೋಷ್ ಅವರನ್ನೂ ದಾಳಿ ನಡೆಸಿದ ದಾಳಿಕೋರರ ಶಂಕಿತ ಪಟ್ಟಿಗೆ ಸೇರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು.. ಜೆಎನ್ ಯು ಹಿಂಸಾಚಾರ ಪ್ರಕರಣದಲ್ಲಿ ದಾಳಿ ನಡೆಸಿದ ಶಂಕಿತ ದಾಳಿಕೋರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪಟ್ಟಿಯಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶೆ ಘೋಷ್ ಅವರ ಹೆಸರೂ ಕೂಡ ಇರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಇತರೆ 8 ಮಂದಿ ಶಂಕಿತರ ಪಟ್ಟಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಎಂಎಸ್ ರಾಂಧವ ಅವರು, ಈ ವರೆಗೆ ತನಿಖಾಧಿಕಾರಿಗಳು ಕಲೆಹಾಕಿರುವ ಮಾಹಿತಿಗಳ ಮೇರೆಗೆ ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಸಿದಂತೆ ಶಂಕಿತ ದಾಳಿಕೋರರನ್ನು ಗುರುತಿಸಲಾಗಿದೆ. ಶಂಕಿತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದರು.

ಅಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಇತರೆ ಮಾಧ್ಯಮಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದನ್ನು ಇಲಾಖೆ ಗಮನಿಸಿದೆ. ಈ ವರೆಗೂ ಅಧಿಕಾರಿಗಳು ಯಾವುದೇ ಶಂಕಿತರನ್ನು ವಶಕ್ಕೆ ಪಡೆದಿಲ್ಲ. ಮತ್ತು ಯಾರನ್ನೂ ತನಿಖೆಗೊಳಪಡಿಸಿಲ್ಲ. ಆದರೂ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳು ಪ್ರಸಾರವಾಗುತ್ತಿವೆ. ಇದೇ ಕಾರಣಕ್ಕೆ ಇಂದು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನಾಧರಿಸಿ ಶಂಕಿತ ದಾಳಿಕೋರರನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಅವರನ್ನು ತನಿಖೆಗೊಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT