ದೇಶ

ದೆಹಲಿ ವಿಧಾನಸಭೆ ಚುನಾವಣೆ: ಆಪ್ ಶಾಸಕ ಎನ್ ಡಿ ಶರ್ಮಾ ರಾಜೀನಾಮೆ

Lingaraj Badiger

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು 20 ಕೋಟಿ ರೂಪಾಯಿ ಪಡೆದು ಭೂ ಮಾಫಿಯಾಗೆ ಚುನಾವಣಾ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿರುವ ಎಎಪಿ ಶಾಸಕ ಎನ್ ಡಿ ಶರ್ಮಾ ಅವರು, ತಾವು ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಮಂಗಳವಾರ ಹೇಳಿದ್ದಾರೆ.

ಕೇಜ್ರಿವಾಲ್ ಅವರು ಪಕ್ಷದ ಶಾಸಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ನನಗೂ 10 ಕೋಟಿ ರೂ. ನೀಡುವಂತೆ ಕೇಳಿದ್ದರು. ಆದರೆ ನಾನು ಪ್ರಾಮಾಣಿಕನಾಗಿದ್ದು, ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಹೀಗಾಗಿ ನಾನು ಪಕ್ಷ ತೊರೆದಿದ್ದೇನೆ ಎಂದು ಬದಾರಪುರ್ ಶಾಸಕ ಹೇಳಿದ್ದಾರೆ.

ಬದಾರಪುರ್ ದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ನಾಯಕ ರಾಮ್ ಸಿಂಗ್ ನೇತಾಜಿ ಅವರು ನಿನ್ನೆಯಷ್ಟೇ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದು, ಹಾಲಿ ಶಾಸಕ ಶರ್ಮಾ ಅವರಿಗೆ ಆಪ್ ಟಿಕೆಟ್ ಕೈತಪ್ಪುವುದು ಖಚಿತವಾದ ಹಿನ್ನಲೆಯಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ನನ್ನ ಕ್ಷೇತ್ರದಲ್ಲಿ ಪಕ್ಷ ಬೇರೆಯವರಿಗೆ ಟಿಕೆಟ್ ನೀಡಿದರೆ ನನ್ನ ವಿರೋಧ ಇಲ್ಲ. ಆದರೆ ಭೂ ಮಾಫಿಯಾದಲ್ಲಿ ತೊಡಗಿರುವವರಿಗೆ ನೀಡುತ್ತಿರುವುದು ಸರಿಯಲ್ಲ. ನಾನು ಅವರ ವಿರುದ್ಧ ಹೋರಾಡಿ ಈ ಪ್ರದೇಶವನ್ನು ರಕ್ಷಿಸಿದ್ದೇನೆ. ಈಗ ಅವರಿಂದ 20 ಕೋಟಿ ರೂ. ಪಡೆದು ಟಿಕೆಟ್ ನೀಡುವುದು ಎಷ್ಟು ಸರಿ ಎಂದು ಶರ್ಮಾ ಪ್ರಶ್ನಿಸಿದ್ದಾರೆ.

SCROLL FOR NEXT