ದೇಶ

ಆಜಾದ್ ಜಾಮೀನು ಷರತ್ತು ಸಡಿಲಿಸಿದ ಕೋರ್ಟ್, ಚುನಾವಣೆ, ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿ ಭೇಟಿಗೆ ಅಸ್ತು

Lingaraj Badiger

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ ದೆಹಲಿ ಕೋರ್ಟ್ ವೈದ್ಯಕೀಯ ಚಿಕಿತ್ಸೆಗಾಗಿ ಮತ್ತು ಚುನಾವಣಾ ಉದ್ದೇಶಕ್ಕಾಗಿ ದೆಹಲಿ ಭೇಟಿಗೆ ಮಂಗಳವಾರ ಅನುಮತಿ ನೀಡಿದೆ.

ಡಿಸೆಂಬರ್ 20ರಂದು ದರ್ಯಾಗಂಜ್ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಚಂದ್ರಶೇಖರ್ ಆಜಾದ್ ಅವರಿಗೆ ದೆಹಲಿ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಅದರಲ್ಲಿ ನಾಲ್ಕು ವಾರಗಳ ಕಾಲ ದೆಹಲಿಗೆ ಭೇಟಿ ನೀಡದಂತೆ ಷರತ್ತು ವಿಧಿಸಲಾಗಿತ್ತು. 

ದೆಹಲಿ ಭೇಟಿಗೆ ಅನುಮತಿ ಕೋರಿ ಆಜಾದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಾಮಿನಿ ಲಾವೊ ಅವರು, ಜಾಮೀನು ಆದೇಶವನ್ನು ಮಾರ್ಪಡಿಸಿ, ದೆಹಲಿ ಭೇಟಿಗೆ ಅನುಮತಿ ನೀಡಿದ್ದಾರೆ.

ಆಜಾದ್ ಸಂಘಟನೆ ಕಳೆದ ಡಿಸೆಂಬರ್ 20ರಂದು ಪೊಲೀಸರ ಅನುಮತಿ ಪಡೆಯದೆ ಸಿಎಎ ವಿರುದ್ಧ ಜಾಮಾ ಮಸೀದಿಯಿಂದ ಜಂತರ್ ಮಂತರ್ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

SCROLL FOR NEXT