ದೇಶ

ಆಶಾದಾಯಕ ಬೆಳವಣಿಗೆ: ದೇಶದಲ್ಲಿ ಕೋವಿಡ್-19 ನಿಂದ ಗುಣಮುಖರಾದವರ ಪ್ರಮಾಣ ಶೇ.60.73ಕ್ಕೆ ಏರಿಕೆ

Nagaraja AB

ನವದೆಹಲಿ: ಆರಂಭದಲ್ಲಿಯೇ ಸೋಂಕು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸಾ ನಿರ್ವಹಣೆಯಿಂದಾಗಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇ.60ನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಚೇತರಿಕೆ ಪ್ರಮಾಣದಲ್ಲಿ ತೀವ್ರ ಗತಿಯ ಏರಿಕೆ ಕಂಡಿದ್ದು, 20, 033 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ.ಇದರಿಂದಾಗಿ ಒಟ್ಟಾರೇ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 3 ಲಕ್ಷದ 79 ಸಾವಿರದ 891ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ದೇಶದಲ್ಲಿ 2 ಲಕ್ಷದ 27 ಸಾವಿರದ 439 ಸಕ್ರಿಯ ಕೊರೋನಾವೈರಸ್ ಪ್ರಕರಣಗಳಿದ್ದು, ಎಲ್ಲವೂ ವೈದ್ಯಕೀಯ ನಿಗಾವಣೆಯಲ್ಲಿದ್ದು,  ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ಕೋವಿಡ್-19 ಪರಿಸ್ಥಿತಿ ಕುರಿತು ಪರಿಶೀಲಿಸಲಾಗಿದೆ ಎಂದು ಹೇಳಲಾಗಿದೆ.

ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಸರ್ಕಾರದ ಎಲ್ಲಾ ಹಂತಗಳಲ್ಲಿ ಸಮನ್ವಯಕಾರಿ ಪ್ರಯತ್ನದಿಂದಾಗಿ ಚೇತರಿಕೆ ಹಾಗೂ ಸಕ್ರಿಯ ಪ್ರಮಾಣಗಳ ನಡುವಿನ ಅಂತರ ನಿರಂತರವಾಗಿ ತಗ್ಗುತ್ತಿದೆ, ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ  ಸೋಂಕು  ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಯನ್ನು ವೇಗವಾಗಿ ಕೈಗೊಳ್ಳಲಾಗುತ್ತಿದೆ.ಪ್ರತಿದಿನ 93 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ
ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

SCROLL FOR NEXT