ದೇಶ

ಇನ್ನು ಮುಂದೆ ಎಲ್ಲಾ ವೈದ್ಯರು ಕೋವಿಡ್ ಪರೀಕ್ಷೆಗೆ ಶಿಫಾರಸ್ಸು ಮಾಡಬಹುದು: ಕೇಂದ್ರ ಆರೋಗ್ಯ ಸಚಿವಾಲಯ

Vishwanath S

ಬೆಂಗಳೂರು: ದೇಶದಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈದ್ಯರು ಕೊರೋನಾ ಸೋಂಕು ಪತ್ತೆಗೆ ಶಿಫಾರಸ್ಸು ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸಲು, ಸೋಂಕಿನ ಮೂಲ ಹುಡುಕಿ ಚಿಕಿತ್ಸೆ ನೀಡುವ ಉದ್ದೇಶದಿಂದ ವೈದ್ಯರಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಮಾರ್ಗಸೂಚಿಯಂತೆ ದೇಶದಲ್ಲಿ ಕೋವಿಡ್ ಸೋಂಕು ಪತ್ತೆ ಪ್ರಯೋಗಾಲಯಗಳ ಸಂಖ್ಯೆ ಏರಿಕೆಯಾಗಿದ್ದು, ಐಸಿಎಂಆರ್ ಮಾರ್ಗಸೂಚಿಯಂತೆ ಸೋಂಕು ಪತ್ತೆ ಕಾರ್ಯ ಬಿರುಸುಗೊಂಡಿದೆ. ಸೋಂಕಿತರ ಗುಣಲಕ್ಷಗಳನ್ನು ನೋಡಿಕೊಂಡು ಸ್ವಾಬ್ ಟೆಸ್ಟ್ ಗೆ ಎಲ್ಲಾ ವೈದ್ಯರು ಶಿಫಾರಸ್ಸು ಮಾಡಬಹುದು ಎಂದು ಹೇಳಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 3,26,826 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈವರೆಗೆ ದೇಶದಲ್ಲಿ 1.27 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಂದೇ ದಿನದಲ್ಲಿ 9 ಸಾವಿರದ 293 ಮಂದಿಗೆ ಸೋಂಕು ಪತ್ತೆಯಾಗಿದೆ.ದೇಶದಲ್ಲಿ ಪ್ರಸ್ತುತ 874 ಸರ್ಕಾರಿ ಮತ್ತು 360 ಖಾಸಗಿ ಪ್ರಯೋಗಾಲಯಗಳ ಮೂಲಕ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ.

SCROLL FOR NEXT