ದೇಶ

ಕೊರೋನಾ ಸೋಂಕು ಪೀಡಿತ ಬಂಧಿತ ಲೇಖಕ ವರವರ ರಾವ್ ನಾನಾವತಿ ಆಸ್ಪತ್ರೆಗೆ ದಾಖಲು

Srinivasamurthy VN

ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಖ್ಯಾತ ಲೇಖಕ ವರವರ ರಾವ್ ಅವರು ಕೊರೋನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂಬೈನ ತಾಲೋಜ ಜೈಲಿನಲ್ಲಿದ್ದ ವರವರ ರಾವ್ ಅವರಿಗೆ ಈ ಹಿಂದೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ 80 ವರ್ಷ ವಯಸ್ಸಿನ ಕವಿಯನ್ನು ನಗರದ ಸೇಂಟ್ ಜಾರ್ಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಅವರನ್ನುಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ ವರವರ ರಾವ್ ಅವರಿಗೆ ನರವೈಜ್ಞಾನಿಕ ಸಮಸ್ಯೆಗಳಿರುವುದರಿಂದ ಅವರನ್ನು ನಾನಾವತಿ ಆಸ್ಪತ್ರೆ ದಾಖಲಿಸಲಾಗಿದೆ. 

ಈ ಹಿಂದೆ ಎಲ್ಗಾರ್‌ ಪರಿಷತ್ ಪ್ರಕರಣದಲ್ಲಿ ವರವರ ರಾವ್ ಮತ್ತು ಇತರ ಒಂಬತ್ತು ಕಾರ್ಯಕರ್ತರನ್ನು ಪುಣೆ ಪೊಲೀಸರು ಬಂಧಿಸಿದ್ದರು. ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಪುಣೆ ಪೊಲೀಸರು ನಂತರ ಈ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಕವಿ ವರವರ ರಾವ್‌ ಕಳೆದ 22 ತಿಂಗಳಿನಿಂದ ಜೈಲಿನಲ್ಲೇ ಇದ್ದಾರೆ. ಪರಿಣಾಮ ಅವರ ಕುಟುಂಬದವರು ವೈದ್ಯಕೀಯ ಕಾರಣ ನೀಡಿ ಜಾಮೀನು ಕೋರಿ ವಿಶೇಷ ಎನ್‌ಐಎ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ, ಜಾಮೀನು ನೀಡಲಾಗಿರಲಿಲ್ಲ.

ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಇವರು ಉದ್ವೇಗಕಾರಿ ಭಾಷಣ ಮಾಡಿದ್ದರಿಂದ ಮರುದಿನ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಉಂಟಾಯಿತು ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಇವರು ಸಂಚು ರೂಪಿಸಿದ್ದರು ಎಂಬ ಆರೋಪ ಕೂಡಾ ಮಾಡಲಾಗಿದೆ. 

SCROLL FOR NEXT