ದೇಶ

ಪುದುಚೆರಿ ವಿಧಾನಸಭೆಯಲ್ಲಿ ನಾಟಕೀಯ ಬೆಳವಣಿಗೆ: ಆರೋಗ್ಯ ಸಚಿವ ಮತ್ತು 3 ಶಾಸಕರಿಂದ ಲೆ.ಗವರ್ನರ್ ಭಾಷಣ ಬಹಿಷ್ಕಾರ!

Sumana Upadhyaya

ಪುದುಚೆರಿ: ಇಲ್ಲಿನ ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವಿನ ಸಂಘರ್ಷ ಮಿತಿ ಮೀರಿ ಹೋಗಿದೆ.
ಇಂದು ವಿಧಾನಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಬಜೆಟ್ ಅಧಿವೇಶನದ ಭಾಷಣವನ್ನು ಬಹಿಷ್ಕರಿಸಿ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣ ರಾವ್, ಸಂಸದೀಯ ಕಾರ್ಯದರ್ಶಿ ಕೆ ಲಕ್ಷ್ಮೀನಾರಾಯಣ, ಸರ್ಕಾರದ ಸಚೇತಕ ಆರ್ ಕೆಆರ್ ಅನಂತರಾಮನ್ ಮತ್ತು ಶಾಸಕ ಟಿ ಜಯಮೂರ್ತಿ ಅವರು ಹೊರನಡೆದ ಪ್ರಸಂಗ ನಡೆಯಿತು.

ಸ್ಪೀಕರ್ ವಿ ಪಿ ಶಿವಕೊಝುಂತು ಮತ್ತು ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರ ಆಹ್ವಾನದ ಮೇರೆಗೆ ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸದನಕ್ಕೆ ಭಾಷಣ ಮಾಡಲು ಆಗಮಿಸಿದರು. ಆದರೆ ಈ ನಾಲ್ವರು ರಾಜ್ಯಪಾಲರ ಭಾಷಣ ಆರಂಭಕ್ಕೆ ಪ್ರತಿಭಟನೆ ಮಾಡಿ ಧಿಕ್ಕರಿಸಿ ಹೊರನಡೆದಿದ್ದಾರೆ.

ನಂತರ ಆರೋಗ್ಯ ಸಚಿವರು ಮುಖಕ್ಕೆ ಕಪ್ಪು ಗವಸು ಮತ್ತು ಕಪ್ಪು ಟವೆಲ್ ಧರಿಸಿ ಸದನಕ್ಕೆ ಬಂದು ವೈದ್ಯರಿಗೆ ತಾವು ಬೆಂಬಲ ನೀಡುವುದಾಗಿ ಹೇಳಿದರು. ಹಿರಿಯ ವೈದ್ಯರೊಬ್ಬರ ಬಗ್ಗೆ ಕೀಳಾಗಿ ಮಾತನಾಡಿ ಲೆಫ್ಟಿನೆಂಟ್ ಗವರ್ನರ್ ಅವರು ನಂತರ ಅವರಲ್ಲಿ ಕ್ಷಮೆಯನ್ನು ಕೂಡ ಕೋರಲಿಲ್ಲ. ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಚರ್ಚೆ ಮಾಡಲು ತಮ್ಮನ್ನು ಭೇಟಿ ಮಾಡಬೇಕೆಂದು ಕೇಳಿದ್ದಕ್ಕೆ ಸಮಯಾವಕಾಶವನ್ನು ಕೂಡ ನೀಡಲಿಲ್ಲ ಅಲ್ಲದೆ ಸರ್ಕಾರ ಪ್ರಸ್ತಾವನೆ ಮಾಡಿದ್ದಕ್ಕೆ ವಿರುದ್ಧವಾಗಿ ರಾಜ್ಯಪಾಲರು ಮೀನುಗಾರರ ಪಿಂಚಣಿ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಇನ್ನುಳಿದ ಮೂವರು ಶಾಸಕರು ಸಹ ಕಪ್ಪು ಬಣ್ಣದ ಶರ್ಟ್ ಧರಿಸಿ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಅವಮಾನವಾಗಿ ಹೇಳಿಕೆ ನೀಡಿರುವ ಲೆಫ್ಟಿನೆಂಟ್ ಗವರ್ನರ್ ಅವರ ಮಾತುಗಳನ್ನು ಖಂಡಿಸುವುದಾಗಿ ಹೇಳಿದರು.

ನಮ್ಮನ್ನು ಅವಮಾನವಾಗಿ ಮಾತನಾಡಿರುವ ಲೆ,ಗವರ್ನರ್ ಅವರ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ನಮಗೆ ಸದನದಲ್ಲಿ ಮಾತನಾಡುವ ಹಕ್ಕು ಇದೆ. ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ಅವರು ಮಾತನಾಡಬಾರದು ಎಂದು ಲಕ್ಷ್ಮೀನಾರಾಯಣ ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ಸರ್ಕಾರದ ಯೋಜನೆಗಳಿಗೆ ಲೆ.ಗವರ್ನರ್ ಅಡ್ಡಗಾಲು ಹಾಕುತ್ತಿದ್ದಾರೆ. ಸರ್ಕಾರದ ಜೊತೆ ಸಹಕರಿಸುತ್ತಿಲ್ಲ. ಪುದುಚೆರಿ ಅಭಿವೃದ್ಧಿಗೆ ಅವರು ಏನೂ ಮಾಡುತ್ತಿಲ್ಲ. ಅಧಿಕಾರಿಯಾಗಿ ಅವರಿಗೆ ಹಣಕಾಸಿನ ಸ್ಥಿತಿಗತಿ ಬಗ್ಗೆ ಅರಿವಿದೆ. ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಕೂಡ ಕೇಂದ್ರದಿಂದ ಹಣ ತರಿಸಲು, ರಾಜ್ಯದ ಆದಾಯ ಹೆಚ್ಚಿಸಲು ಸಹಕರಿಸುತ್ತಿಲ್ಲ. ಬಜೆಟ್ ಗೆ ಅನುಮೋದನೆ ನೀಡದೆ ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅನಂತರಾಮನ್ ಆರೋಪಿಸಿದರು.

SCROLL FOR NEXT