ಲಖನೌ: ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಯಾವುದೇ ವಿವಾದ ತಲೆ ಎತ್ತಬಾರದು ಎಂಬ ಉದ್ದೇಶದಿಂದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಕೆಳಗೆ ಸಾವಿರಾರು ಅಡಿ ಆಳದಲ್ಲಿ ಮಂದಿರದ ಸಂಪೂರ್ಣ ಇತಿಹಾಸ ಇರುವ ಸಂಪುಟ(Time-capsule)ವನ್ನು ಹುದುಗಿಸಿಡಲಾಗುತ್ತಿದೆ.
ಹೌದು, ರಾಮ ಮಂದಿರದ ಕೆಳಗೆ ತಾಮ್ರದ ಕೆತ್ತನೆಯ ಸಂಪುಟವನ್ನು ತಯಾರಿಸಿ ಹುದುಗಿಸಿಡಲಾಗುತ್ತಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ಅವರು ಸೋಮವಾರ ಹೇಳಿದ್ದಾರೆ.
ಆದಾಗ್ಯೂ, ತಾಮ್ರದ ಸಂಪುಟದ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಮಂದಿರ ನಿರ್ಮಾಣ ಸ್ಥಳದಲ್ಲಿ ಸಂಪುಟ ಹುದುಗಿಸಿಡಲಾಗುತ್ತಿದೆ ಎಂದು ನೃತ್ಯ ಗೋಪಾಲ್ ಅವರು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ವಾದ-ವಿವಾದ ಪರಿಗಣಿಸಿ ಭವಿಷ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗಕೂಡದು ಎನ್ನುವ ಕಾಳಜಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಮುಂದೆ ಇತಿಹಾಸಕಾರರು ಅಥವಾ ಸಂಶೋಧಕರು ಮಂದಿರಕ್ಕೆ ಸಂಬಂಧಿಸಿ ಎಂದೂ ಪ್ರಶ್ನೆ ಎತ್ತಬಾರದು. ಹಾಗೆಯೇ ಮತ್ತೆ ಎಂದಾದರೂ ಕೋರ್ಟ್ ಮೆಟ್ಟಿಲೇರಿದರೆ ದೇವಾಲಯದ ಅಸ್ತಿತ್ವಕ್ಕೆ ಧಕ್ಕೆಯಾಗಬಾರದು ಎಂದು ಈ ಸಂಪುಟವನ್ನು ಹುದುಗಿಡಲಾಗುತ್ತಿದೆ.
ಭಾರತಕ್ಕೆ ಬಾಬರ್ ದಾಳಿ ಮಾಡಿದ ಸಂದರ್ಭದಲ್ಲಿ ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದರು ಎನ್ನುವ ಆರೋಪವಿದೆ. ಇದೇ ಕಾರಣಕ್ಕಾಗಿಯೇ ಸುಪ್ರೀಂಕೋರ್ಟ್‌ನಲ್ಲಿ ಸುಮಾರು 4 ದಶಕಗಳ ಕಾಲ ಕಾನೂನು ಹೋರಾಟ ನಡೆದಿದೆ.