ದೇಶ

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳ ಪರ್ವಕ್ಕೆ ನಾಂದಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಕ್ಕೆ ಸಚಿವ ಸಂಪುಟ ಅನುಮೋದನೆ

Raghavendra Adiga

ನವದೆಹಲಿ:  ಶಾಲಾ ದಾಖಲಾತಿ ಹೆಚ್ಚಳ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರೂಪಿಸಿರುವ ಬಹುನಿರೀಕ್ಷಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಕ್ರಿಯಾಲ್‌ ನಿಶಾಂಕ್‌ ಕೂಡ ಉಪಸ್ಥಿತರಿದ್ದರು.

ಸಚಿವ ಸಂಪುಟ ತೀರ್ಮಾನಗಳ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ, ರಾಷ್ಟ್ರೀಯ ಶಿಕ್ಷಣ ನೀತಿ ಬಹು-ವಿಷಯಗಳ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ಐದು ವರ್ಷದ ಪದವಿ / ಸ್ನಾತಕೋತ್ತರ ಕೋರ್ಸ್ ಅನ್ನು ಸಂಯೋಜಿಸುತ್ತದೆ ಎಂದು ಹೇಳಿದ್ದಾರೆ

ಅಲ್ಲದೆ, ಇ-ಕೋರ್ಸ್‌ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು, ವರ್ಚುಯಲ್ ಪ್ರಯೋಗಾಲಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಎನ್‌ಇಟಿಎಫ್) ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.. 

ಗಮನಾರ್ಹವಾಗಿ, ಹೊಸ ಶಿಕ್ಷಣ ನೀತಿಯ ರಚಿಸುವುದು ಮತ್ತು ಅದನ್ನು ಅಂತಿಮಗೊಳಿಸುವ ಪ್ರಕ್ರಿಯೆಗೆ ಹಿಂದಿನ ಮೋದಿ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಚಾಲನೆ ನೀಡಿದ್ದರು. ಈ ನೀತಿಯನ್ನು ಅಂತಿಮಗೊಳಿಸಿ, ಅನುಮೋದನೆ ಪಡೆಯಲು ಆರು ವರ್ಷಗಳು ಬೇಕಾಯಿತು.

ಮೊದಲು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹೊಸ ಶಿಕ್ಷಣ ನೀತಿ ರೂಪಿಸಿದ್ದರು. ನಂತರ ದೇಶದ ಶಿಕ್ಷಣ ವಲಯದಲ್ಲಿ ಬದಲಾವಣೆಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನೀತಿ ರಚಿಸಿತು. ಈ ಮೂಲಕ ಡಿಜಿಟಲ್‌ ಶಿಕ್ಷಣ ಮತ್ತು ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ.

ನೀತಿಯ ಇತರ ವೈಶಿಷ್ಟ್ಯಗಳೆಂದರೆ, ಶ್ರೇಣೀಕೃತ ಶೈಕ್ಷಣಿಕ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆ ಮತ್ತು ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ನಿಯಂತ್ರಕ ಸಂಸ್ಥೆ ಇರಲಿವೆ. 

SCROLL FOR NEXT