ದೇಶ

ಕಳ್ಳಸಾಗಣೆ ಮೂಲಕ ಲಂಡನ್ ಸೇರಿದ್ದ ಶಿವನ ಪುರಾತನ ವಿಗ್ರಹ ಶೀಘ್ರದಲ್ಲೇ ಭಾರತಕ್ಕೆ!

Manjula VN

ಲಂಡನ್: ರಾಜಸ್ಥಾನ ರಾಜ್ಯದ ದೇವಾಲಯದವೊಂದರಿಂದ ಕಳ್ಳತನ ಮಾಡಿ, ಲಂಡನ್'ಗೆ ಸಾಗಿಸಲಾಗಿದ್ದ ಅಪರೂಪದ ನಾಟ್ಯಭಂಗಿಯಲ್ಲಿರುವ ಶಿವನ ವಿಗ್ರಹವನ್ನು ಬ್ರಿಟನ್ ಅಧಿಕಾರಿಗಳು ಶೀಘ್ರದಲ್ಲಿಯೇ ಭಾರತಕ್ಕೆ ಹಸ್ತಾಂತರ ಮಾಡಲಿದ್ದಾರೆ. 

1998ರಲ್ಲಿ ರಾಜಸ್ಥಾನರ ಬರೇಲಿಯಲ್ಲಿರುವ ಗಟೇಶ್ವ ದೇವಸ್ಥಾನದಿಂದ 9ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದ ಪ್ರತಿಹಾರ ಶಿವನಮೂರ್ತಿಯನ್ನು ಕಳ್ಳತನ ಮಾಡಲಾಗಿತ್ತು. ಬಳಿಕ ಕಳ್ಳ ಸಾಗಾಣಿಕೆ ಮೂಲಕ ಇಂಗ್ಲೆಂಡ್ ತಲುಪಿಸಲಾಗಿತ್ತು. 

ಈ ಮೂರ್ತಿಯನ್ನು ಇಂಗ್ಲೆಂಡ್ ನಲ್ಲಿದ್ದ ಆಗರ್ಭ ಶ್ರೀಮಂತರೊಬ್ಬರು ಭಾರೀ ಹಣ ನೀಡಿ ಖರೀದಿ ಮಾಡಿದ್ದರು. ಆದರೆ, ವಿಗ್ರಹ ಭಾರತದೊಂದಿಗೆ ಆಧ್ಯಾತ್ಮಿಕ ನಂಟು ಹೊಂದಿದೆ ಎಂಬ ವಿಚಾರ ಅರಿತ ವ್ಯಕ್ತಿ ಈ ಮೂರ್ತಿಯನ್ನು ಬ್ರಿಟನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ 2005ರಲ್ಲಿ ಹಿಂತಿರುಗಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

2017ರ ಆಗಸ್ಟ್ ತಿಂಗಳಿನಲ್ಲಿ ಭಾರತದ ಪುರಾತತ್ವ ಇಲಾಖೆ ಅಧಿಕಾರಿಗಳು ಇಂಡಿಯಾ ಹೌಸ್ಗೆ ಭೇಟಿ ನೀಡಿದ್ದು, ಇದು ಬರೋಲಿಯ ಗಟೇಶ್ವರ ದೇವಸ್ಥಾನದಿಂದ ಕಳ್ಳತನ ಮಾಡಲಾಗಿರುವ ಶಿವನಮೂರ್ತಿ ಎಂದು ಖಚಿತಪಡಿಸಿದ್ದಾರೆ. ಇದಾದ ಬಳಿಕ ಈ ಮೂರ್ತಿಯನ್ನು ಭಾರತಕ್ಕೆ ಮರಳಿ ತರುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 

ಇದೀಗ ಈ ಶಿವನ ಮೂರ್ತಿ ಶೀಘ್ರದಲ್ಲಿಯೇ ಭಾರತಕ್ಕೆ ಬರಲಿದ್ದು, ಮರಳಿ ಬರೋಲಿಯ ಗಟೇಶ್ವರ ದೇವಸ್ಥಾನದಲ್ಲಿ ಮರು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

SCROLL FOR NEXT