ದೇಶ

ರಾಷ್ಟ್ರದಲ್ಲಿ ಕೊರೋನಾಘಾತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಕಾರಣನಾ?

Nagaraja AB

ಲಖನೌ: ರಾಷ್ಟ್ರದಲ್ಲಿ ಕೊರೋನಾವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಈ ಸೋಂಕು ದೇಶಕ್ಕೆ ವಕ್ಕರಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಕಾರಣ ಎಂಬಂತಹ ಆರೋಪಗಳು ಕೇಳಿಬರುತ್ತಿವೆ. 

ಫೆಬ್ರವರಿಯಲ್ಲಿ ಅಹಮದಾಬಾದ್ ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮನದೊಂದಿಗೆ ಕೊರೋನಾವೈರಸ್ ನ್ನು ತಂದಿಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಸುಹೆಲ್ದೇವ್ ಪಕ್ಷ ಆರೋಪಿಸಿದೆ.

ನಮಸ್ತೆ ಟ್ರಂಪ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡೊನಾಲ್ಡ್ ಟ್ರಂಪ್ ಜೊತೆಗೆ  ಅಮೆರಿಕಾದಿಂದ ಆಗಮಿಸಿದ್ದ ಸಾವಿರಾರು ಜನರನ್ನು ತಪಾಸಣೆಯೇ ಮಾಡಿಲ್ಲ ಎಂದು ಸುಹೆಲ್ದೇವ್ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಬರ್ ಹೇಳಿದ್ದಾರೆ.

ದೇಶದಲ್ಲಿ ಕೊರೋನಾವೈರಸ್ ಹರಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಟ್ರಂಪ್ ಗೆ ಸ್ವಾಗತ ಕೋರಲು ಹಾಗೂ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವತ್ತಾ ಬ್ಯುಸಿಯಾಗಿದ್ದರು  ಎಂದು ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದ್ದಾರೆ. 

ಕೇರಳದಲ್ಲಿ ಮೊದಲ ಬಾರಿಗೆ ಕೊರೋನಾವೈರಸ್ ಪತ್ತೆಯಾದ ಜನವರಿ 30 ರಿಂದಲೂ ದೇಶದಲ್ಲಿನ ಎಲ್ಲ ಅಂತಾರಾಷ್ಟ್ರೀಯ  ನಿಲ್ದಾಣಗಳನ್ನು ಮುಚ್ಚಿದ್ದರೆ ವೈರಸ್ ಹರಡುವ ಸಾಧ್ಯತೆ ಇರುತ್ತಿರಲಿಲ್ಲ, ಜನವರಿ 15ರಿಂದ ಮಾರ್ಚ್ 23ರವರೆಗೂ ಸುಮಾರು 78 ಲಕ್ಷ ಜನರು ವಿದೇಶದಿಂದ ಬಂದಿದ್ದಾರೆ ಆದರೆ, ಕೇವಲ 26 ಲಕ್ಷ ಜನರು ಮಾತ್ರ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ ಎಂದು ತಿಳಿಸಿದರು. 

ಗುಜರಾತ್, ಮುಂಬೈ ನಂತರ ದೆಹಲಿಯಲ್ಲಿ ಕೊರೋನಾವೈರಸ್ ಹರಡಲು ಅಹಮದಾಬಾದ್ ನಲ್ಲಿ ನಡೆದ ಟ್ರಂಪ್ ಸ್ವಾಗತ ಕಾರ್ಯಕ್ರಮವೇ ಕಾರಣ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಕೂಡಾ ಭಾನುವಾರ ಆರೋಪಿಸಿದ್ದರು. 

ಡೊನಾಲ್ಡ್ ಟ್ರಂಪ್ ಕಾರ್ಯಕ್ರಮದಲ್ಲಿ ಅಪಾರ ಜನಸ್ತೋಮ ನೆರೆದಿದ್ದರಿಂದಲೇ ಕೊರೋನಾ ಸೋಂಕು ಹರಡಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಅವರು ಟೀಕಿಸಿದ್ದಾರೆ.

SCROLL FOR NEXT