ದೇಶ

ಚೀನಾದ ಯಾವುದೇ ಸೈನಿಕ ಭಾರತ ಪ್ರವೇಶಿಸಿಲ್ಲ ಎಂದು ಸರ್ಕಾರ ಖಚಿತಪಡಿಸಬಹುದೇ?: ರಾಹುಲ್ ಗಾಂಧಿ

Lingaraj Badiger

ನವದೆಹಲಿ: ಭಾರತ-ಚೀನಾ ಗಡಿ ಭಾಗದಲ್ಲಿ ಸೇನಾ ಜಮಾವಣೆಯ ಶಕ್ತಿ ಪ್ರದರ್ಶನ ಮುಂದುವರೆದಿದ್ದು, ಚೀನಾದ ಸೈನಿಕರು ಭಾರತ ಪ್ರವೇಶಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಒತ್ತಾಯಿಸಿದ್ದಾರೆ.

ಪೂರ್ವ ಲಡಾಖ್ ನಲ್ಲಿ ಚೀನಾ ಸಾಕಷ್ಟು ಸಂಖ್ಯೆಯಲ್ಲಿ ಸೇನಾ ಜಮಾವಣೆ ಮಾಡಿದೆ. ಭಾರತ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಚೀನಾದ ಯಾವುದೇ ಸೈನಿಕ ಭಾರತ ಪ್ರವೇಶಿಸಿಲ್ಲ ಎಂದು ಕೇಂದ್ರ ಸರ್ಕಾರ ಖಚಿತಪಡಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.

ಲಡಾಕ್‌ನಲ್ಲಿ ಸೇನೆ ಜಮಾವಣೆಗೆ ಸಂಬಂಧಿಸಿದಂತೆ ಜೂನ್ 6 ರಂದು ಭಾರತ ಮತ್ತು ಚೀನಾ ಉನ್ನತ ಮಟ್ಟದ ಮಿಲಿಟರಿ ಸಭೆ ನಡೆಸುವ ಕುರಿತ ವರದಿಯನ್ನು ಶೇರ್ ಮಾಡಿರುವ ರಾಹುಲ್ ಗಾಂಧಿ, ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಗಡಿಯಲ್ಲಿ ಏನಾಗುತ್ತಿದೆ ಎಂಬುದನ್ನು ದೇಶಕ್ಕೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಲಡಾಖ್‌ನ ವಾಸ್ತವ ಗಡಿ ನಿಯಂತ್ರಣಾ ರೇಖೆ ಮತ್ತು ಉತ್ತರ ಸಿಕ್ಕಿಂನ ಮುಂಚೂಣಿ ನೆಲೆಯ ಅನೇಕ ಕಡೆಗಳಲ್ಲಿ ಪರಿಸ್ಥಿತಿ ಈಗ ಬೂದಿಮುಚ್ಚಿದ ಕೆಂಡದಂತಿದೆ. ಈ ವಲಯದ ಎರಡೂ ಕಡೆಗಳಲ್ಲಿ ಬೃಹತ್‌ ಸೇನಾ ಜಮಾವಣೆಯಾಗಿದೆ. ಕಳೆದ ತಿಂಗಳಲ್ಲಿ ನಡೆದ ಎರಡು ಸೇನಾ ಸಂಘರ್ಷಗಳ ಬಳಿಕ ಈ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

SCROLL FOR NEXT